ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಏರಿಸಿದ್ದೆ ಮೋದಿ ಜನತೆಗೆ ನೀಡಿದ ಅಚ್ಛೆ ದಿನ್ : ಎಐಸಿಸಿ ಸದಸ್ಯ ಅಮೃತ್ ಶೆಣೈ
ಉಡುಪಿ: ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಹೆಚ್ಚಿಸಿ ಮಧ್ಯಮ ಹಾಗೂ ಬಡವರ್ಗದವರಿಗೆ ಸಂಕಟ ತಂದಿರಿಸಿದ್ದೇ ಮೋದಿಯವರು ದೇಶದ ಜನತೆಗೆ ನೀಡಿದ ಅಚ್ಛೇ ದಿನ್ ಎಂದು ಎಐಸಿಸಿ ಸದಸ್ಯ ಅಮೃತ್ ಶೆಣೈ ಹೇಳಿದರು.
ಅವರು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಆಯೋಜಿಸಿದ ತೈಲ ಬೆಲೆ ಏರಿಕೆ ವಿರುದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿಸಿ ಮಾತನಾಡಿದರು.
ಕೇಂದ್ರ ಸರಕಾರವು ಅಧಿಕಾರಕ್ಕೆ ಬರುವ ಮೊದಲು ಪ್ರಧಾನ ಮಂತ್ರಿಯಾದಂತಹ ನರೇಂದ್ರ ಮೋದಿ ಅವರು ಸುಳ್ಳು ಭರವಸೆಯನ್ನು ನೀಡಿ, ಅಧಿಕಾರಕ್ಕೆ ಬಂದು ತೈಲ ಬೆಲೆಯನ್ನು ಪ್ರತಿದಿನ ಏರಿಸುತ್ತಾ ಬಂದಿದ್ದಾರೆ ಎಂದು ದೂರಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರೂ, ದೇಶಿಯ ಮಾರುಕಟ್ಟೆಯಲ್ಲಿ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಮೋದಿ ಆಳ್ವಿಕೆ ಬಂದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಕೂಡ ಕೇಂದ್ರ ಸರಕಾರ ತೈಲ ಬೆಲೆಯನ್ನು ಇಳಿಸುವ ಬದಲು ಏರಿಸುತ್ತಾ ಹೋಗುತ್ತಿದೆ. ಪ್ರತಿ ದಿನದ ತೈಲ ಬೆಲೆಯಿಂದ ಗ್ರಾಹಕರಿಗೆ ಪೆಟ್ರೋಲ್, ಡಿಸೆಲ್ ದುಬಾರಿಯಾಗುತ್ತಿದೆ. ಪ್ರತಿಯೊಂದಕ್ಕೂ ಜಿಎಸ್ಟಿ ತೆರಿಗೆ ಹಾಕಿದ್ದರೂ ತೈಲ ಉತ್ಪನ್ನಗಳಿಗೆ ಜಿಎಸ್ಟಿ ಅಳವಡಿಸಿಲ್ಲ. ಇದು ಜನ ಸಾಮನ್ಯರಿಗೆ ತೀವ್ರ ಹೊರೆಯಾಗಿದೆ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಬೆಲೆಯು 1 ರೂ. ಹೆಚ್ಚಾದರೂ ಸಹಿತ ರೋಡಿಗಿಳಿದು ಧರಣಿ ಮಾಡುತ್ತಿದ್ದ ಬಿಜೆಪಿ ಅವರೇ ಅಧಿಕಾರದಲ್ಲಿದ್ದರೂ ಯಾವ ಪ್ರತಿಭಟನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ಜನಸಾಮಾನ್ಯರಿಗೆ ನೀಡಿರುವ ಆಶ್ವಾಸನೆಗಳನ್ನು ಒಂದು ಈಡೇರಿಸಿಲ್ಲ. ದೇಶದ ಯುವಕರಿಗೆ ಚುನಾವಣೆ ಸಂದರ್ಭ ಮೋದಿ ಅವರು ಪ್ರತಿವರ್ಷ ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ದೇಶದ ಯುವಕರು ಮೋದಿಯವರ ಮರಳು ಮಾತಿಗೆ ಬಿದ್ದು ಮತವನ್ನು ನೀಡಿದ್ರು.ಅದ್ರೆ ಮೋದಿಯವರು ಇವೆರಗೆ 10 ಶೇಕಾಡದಷ್ಟು ಕೂಡಾ ಉದ್ಯೋಗ ಸೃಷ್ಟಿ ಮಾಡಿಲ್ಲ . ಈ ವಿಚಾರವನ್ನು ಮೋದಿ ಹಾಗೂ ಅವರ ಆಪ್ತ ನಾಯಕರು ಮರೆತರೂ ದೇಶದ ಯುವ ಜನಾಂಗ ಮರೆತಿಲ್ಲ ಎಂದು ಮೋದಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಕರಾವಳಿ ಭಾಗದ ಬಿಜೆಪಿ ಸಂಸದರು ಹಾಗೂ ಜನಪ್ರತಿನಿದಿಗಳು ಕೇವಲ ಜಿಲ್ಲೆಯಲ್ಲಿ ಬೆಂಕಿ ಹಾಕುವ ಹೇಳಿಕೆ ನೀಡುತ್ತಾರೆ ಹೊರತು ಅವರಿಗೆ ಜಿಲ್ಲೆಯ ಅಭಿವೃದ್ದಿ ಬಗ್ಗೆ ಒಂಚೂರು ಆಸಕ್ತಿ ಇಲ್ಲ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ತನ್ನ ಚುನಾವಣೆ ಭರವಸೆಗಳ ಈಡೇರಿಸುವ ವೈಫಲ್ಯ ಮುಚ್ಚಿಕೊಳ್ಳಲು ಪೂರ್ವಾಪರ ವಿಚಾರ ಮಾಡದೇ ಆರ್ಥಿಕ ಪಂಡಿತರ ಸಲಹೆ ಪಡೆಯದೇ ದೊಡ್ಡ ಮೊತ್ತದ ನೋಟ್ ಬ್ಯಾನ್ ಕಾರ್ಯಕ್ಕೆ ಕೈ ಹಾಕಿ ಸಂಪೂರ್ಣ ವಿಫಲವಾಯಿತು. ಇದರಿಂದ ದೇಶದ ಒಟ್ಟು ವರಮಾನದಲ್ಲಿ ಬಾರಿ ಇಳಿಕೆಯಾಗಿ ಆರ್ಥಿಕ ತುರ್ತು ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ದೇಶದ ದೊಡ್ಡ ಕಾಪೋರೇಟ್ ಕಂಪನಿಗಳ ಕೈಯಲ್ಲಿರುವ ಮಾಧ್ಯಮಗಳ ಮೂಲಕ ಸ್ವತಃ ಮೋದಿ ಅವರು ಈ ದೇಶದ ನಾಗರಿಕರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಭರವಸೆ ನೀಡುತ್ತ ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿದ್ದರು. ಆದರೆ ‘ಆ ಅಚ್ಚೆ ದಿನ’ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಕಪ್ಪು ಹಣ ಪತ್ತೆ ಹಚ್ಚಿ ದೇಶದ ಪ್ರತಿ ಪ್ರಜೆಗೆ ರೂ. 15 ಲಕ್ಷ ಜನಧನ್ ಖಾತೆಗೆ ಜಮೆ ಮಾಡುವ, ಪ್ರತಿ ವರ್ಷಕ್ಕೆ ನಿರು ದ್ಯೋಗಿ ಯುವಜನರಿಗೆ 2 ಕೋಟಿ ಉದ್ಯೋಗ ಸೃಷ್ಟಿ, ಭಯೋ ತ್ಪಾದನೆ ತಡೆದು ಗಡಿಯಲ್ಲಿ ಶಾಂತಿ ನೆಲೆ ಸುವಂತೆ ಮಾಡುವುದು, ಜೀವನಾ ವಶ್ಯಕ ವಸ್ತುಗಳು ಸೇರಿದಂತೆ ತೈಲ ಬೆಲೆ ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಮೋದಿಯವರ ಈ ಬಣ್ಣದ ಮಾತುಗಳಿಗೆ ಮರುಳಾದ ಜನ ಬಿಜೆಪಿಗೆ ಮತ ನೀಡಿ ಆಯ್ಕೆ ಮಾಡಿ ನಾಲ್ಕು ವರ್ಷ ಗತಿಸಿದರು ಕೊಟ್ಟ ಒಂದು ಭರವಸೆ ಈಡೇರಿಸಲಾಗದೆ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಕಾಂಗ್ರೆಸ್ ನಾಯಕರಾದ ರೋಶನಿ ಓಲಿವೇರಾ, ಸುನಿತಾ ಶೆಟ್ಟಿ, ಸರಳಾ ಕಾಂಚನ್, ಮಲ್ಲಿಕಾ ಬಾಲಕೃಷ್ಣ, ವೈ ಬಿ ರಾಘವೇಂದ್ರ, ಸರಸು ಬಂಗೇರ, ಶಂಕರ್ ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ, ಐಡಾಗಿಬ್ಬಾ ಡಿಸೋಜಾ, ಭಾಸ್ಕರ್ ರಾವ್ ಕಿದಿಯೂರು, ಪ್ರಶಾಂತ್ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನೀರಜ್, ಸಂಜಯ್, ಜೊಯೆಲ್, ಸುಜಯ ಪೂಜಾರಿ, ನಾರಾಯಣ ಕುಂದರ್, ಜನಾರ್ದನ ಭಂಡಾರ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.