Home Mangalorean News Kannada News ನಾಳೆ ಬಹುಮತ ಸಾಬೀತುಪಡಿಸೇ ತೀರುತ್ತೇವೆ: ಶೋಭಾ ಕರಂದ್ಲಾಜೆ

ನಾಳೆ ಬಹುಮತ ಸಾಬೀತುಪಡಿಸೇ ತೀರುತ್ತೇವೆ: ಶೋಭಾ ಕರಂದ್ಲಾಜೆ

Spread the love

ನಾಳೆ ಬಹುಮತ ಸಾಬೀತುಪಡಿಸೇ ತೀರುತ್ತೇವೆ: ಶೋಭಾ ಕರಂದ್ಲಾಜೆ

ಬೆಂಗಳೂರು: ಕೆ.ಜಿ.ಬೋಪಯ್ಯ ಅವರು ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಸ್ಪೀಕರ್‌ ಆಗಿದ್ದ ಅವಧಿಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ವರ್ಷ ಆಡಳಿತ ಕೊಟ್ಟ ಕಾಂಗ್ರೆಸ್‌ ಕೇವಲ 78 ಸೀಟು ಗಳಿಸಿ ಮಾನಸಿಕ ತೊಳಲಾಟದಿಂದ ಬಳಲುತ್ತಿದೆ. ಕೆ.ಜಿ.ಬೋಪಯ್ಯ ಅವರ ನೇಮಕಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದೆಯೂ ಯುಪಿಎ ಅವಧಿಯಲ್ಲಿಯೇ ಹಂಸರಾಜ್ ಬಾರದ್ವಾಜ್ ಅವರು ಕೆ.ಜಿ.ಬೋಪಯ್ಯ ಅವರನ್ನು ನೇಮಿಸಿದ್ದರು. ಅಂದು ಇಲ್ಲದ ಭಯ ಇಂದೇಕೆ ಎಂದು ಪ್ರಶ್ನಿಸಿದರು.

ಹಂಗಾಮಿ ಸಭಾಧ್ಯಕ್ಷರೇ ನಾಳಿನ ವಿಧಾನ ಮಂಡಲದ ಅಧಿವೇಶನ ನಡೆಸಿ, ಎಲ್ಲ ಶಾಸಕರಿಗೂ ಪ್ರಮಾಣ ವಚನ ಬೋಧಿಸಲಿದ್ದಾರೆ. ಸಂಜೆ ನಡೆಯುವ ಬಹುಮತ ಸಾಬೀತುವಿನಲ್ಲೂ ಕೂಡ ಅವರೇ ಕಾರ್ಯನಿರ್ವಹಿಸುತ್ತಾರೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಹೀಗಿದ್ದರೂ ಬೋಪಯ್ಯ ಅವರ ನೇಮಕಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಕಾಂಗ್ರೆಸ್ ಶಾಸಕರಿಗೆ ಹತಾಶೆ

ಕಾಂಗ್ರೆಸ್‌ನ ಶಾಸಕರು ಇಂದು ಹತಾಶರಾಗಿದ್ದಾರೆ. ಜೆಡಿಎಸ್‌ ತಮ್ಮನ್ನು ನಡೆಸಿಕೊಳ್ಳುವ ಕುರಿತು ಅವರು ಭಯದಲ್ಲಿದ್ದಾರೆ. 78 ಸೀಟುಗಳನ್ನು ಗೆದ್ದ ಕಾಂಗ್ರೆಸ್‌ ಇಂದು ಕಡಿಮೆ ಸೀಟುಗಳನ್ನು ಪಡೆದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಿರುವಾಗ ನಾವು ನಾಳೆ ಬಹುಮತ ಸಾಬೀತುಪಡಿಸುತ್ತೇವೆ ಎನ್ನುವ ವಿಶ್ವಾಸದಿಂದಲೇ ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್​ನವರು ಹಿಟ್ಲರ್​ ರೀತಿ ನಡೆದುಕೊಂಡರು. ಅದಕ್ಕಾಗಿ ಕರ್ನಾಟಕದ ಜನರು ಅವರಿಗೆ ಸರಿಯಾದ ದಾರಿ ತೋರಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​, ಜೆಡಿಎಸ್​ಗೆ ಅಷ್ಟು ಮತ ಹಾಕಿದ್ದಾರೆ. ನಿಮ್ಮ ದುರಹಂಕಾರಕ್ಕೆ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ನರೇಂದ್ರ ಮೋದಿ ಅತ್ಯಂತ ಹೆಚ್ಚು ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಿದ್ದಾರೆ. ನಾವು 22 ರಾಜ್ಯಗಳಲ್ಲಿ ಅಧಿಕಾರವನ್ನು ನಡೆಸುತ್ತಿದ್ದೇವೆ. ನಮ್ಮ ದೇಶದ ಪ್ರಧಾನಿ ಬೇರೆ ದೇಶಕ್ಕೆ ಹೋದರು ಜನರು ಗೌರವ ಕೊಡುತ್ತಾರೆ ಎಂದು ಹೇಳಿದರು.


Spread the love

Exit mobile version