ನಿಪ್ಪಾಣಿಯಲ್ಲಿ ಸಮಸ್ಯೆಯಲ್ಲಿದ್ದ ಉಡುಪಿಗರ ಸಮಸ್ಯೆಗೆ ಸ್ಪಂದಿಸಿದ ಸರಕಾರ – ಹೆಲ್ತ್ ಚೆಕ್ ಅಪ್ ಬಳಿಕ ಗಡಿ ಪ್ರವೇಶಕ್ಕೆ ಅವಕಾಶ
ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಸಹಿತ 30 ಜನ ಕಳೆದ ಎರಡು ದಿನದಿಂದ ಕರ್ನಾಟಕ ಗಡಿ ದಾಟಲಾಗದೆ ಅನುಭವಿಸುತ್ತಿದ್ದ ಸಮಸ್ಯೆಗೆ ಕೊನೆಗೆ ರಾಜ್ಯ ಸರಕಾರ ಸ್ಪಂದಿಸಿದೆ.
ಉಡುಪಿ: ಮಂಬೈ ನ ಬಸ್ ಮಾಲಕರು ಮತ್ತು ಏಜೆಂಟರ ಸುಳ್ಳು ಭರವಸೆಯನ್ನು ನಂಬಿ ತಲಾ 4500 ರೂ ಕೊಟ್ಟು ಮುಂಬಯಿಯಿಂದ ಬಂದ 30 ಮಂದಿ ಪ್ರಯಾಣಿಕರು ಆಗಮಿಸಿದ್ದರು. ಮುಂಬಯಿನಿಂದ ಖಾಸಗಿ ಬಸ್‌ನಲ್ಲಿ ಬಂದ ಪ್ರಯಾಣಿಕರಿಗೆ ನಿಪ್ಪಾಣಿಯಿಂದ 19 ಕಿ ಮೀ ದೂರದಲ್ಲಿರುವ ಮಹಾರಾಷ್ಟ್ರ ಗಡಿಗೆ ಬಂದಾಗಲೇ ಬಸ್ಸಿನವರ ಮೋಸ ತಿಳಿದು ಆಘಾತಗೊಂಡರು. ಮಹಾರಾಷ್ಟ್ರದ ಪಾಸ್ ಪಡೆದಿದ್ದ ಈ ಗುಂಪು, ಕರ್ನಾಟಕ ಪ್ರವೇಶದ ಸೇವಾಸಿಂಧು ಪಾಸ್ ಪಡೆದಿರಲಿಲ್ಲ. ಹಾಗಾಗಿ ರಾಜ್ಯದೊಳಗೆ ಪ್ರವೇಶ ಸಾಧ್ಯವಾಗುತ್ತಿಲ್ಲ. ಮೇ 18 ರ ಬೆಳಿಗ್ಗೆ 3 ಘಂಟೆಯಿಂದ ಗಡಿ ಭಾಗದಲ್ಲಿ ಬಸ್ಸಿನಲ್ಲಿ ಉಳಿದಿರುವ ಕರಾವಳಿ ಜನರಿಗೆ ಕರ್ನಾಟಕ ಪ್ರವೇಶಿಸಲು ಬೆಳಗಾವಿ ಜಿಲ್ಲಾಡಳಿತ ನಿರಾಕರಿಸಿತು.
ಈ ಕುರಿತು ಮಾಹಿತಿ ಪಡೆದು ಉಡುಪಿ ಜಿಲ್ಲೆಯ ಹಲವಾರು ಜನಪ್ರತಿನಿಧಿಗಳು ಹಾಗೂ ಪತ್ರಕರ್ತರನ್ನು ಸಂಪರ್ಕಿಸಿದ ತಂದ ತಾವು ಮೋಸ ಹೋದ ಬಗ್ಗೆ ಹಾಗೂ ಒಂದು ಸಾರಿ ಜಿಲ್ಲೆಗೆ ಬರಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಅವರ ಮನವಿ ಸ್ಪಂದಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಗೆಳೆಯರ ಸಹಾಯದಿಂದ ಪ್ರಯಾಣಿಕರಿಗೆ ಊಟ ಮತ್ತು ಉಪಚಾರದ ವ್ಯವಸ್ಥೆ ಮಾಡಿದ್ದಾರೆ.
ಅಲ್ಲದೆ ಟೀಮ್ ಮ್ಯಾಂಗಲೋರಿಯನ್ ಕೂಡ ಕನಿಷ್ಠ ಬಸ್ಸಿನಲ್ಲಿರುವ ಗರ್ಭಿಣಿ ಮಹಿಳೆ ಹಾಗೂ ವೃದ್ಧರಿಗೆ ಮಾನವೀಯ ನೆಲೆಯಲ್ಲಿ ಉಡುಪಿಗೆ ಕಳುಹಿಸಿಕೊಡುವಂತೆ ಉಡುಪಿಯ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಸ್ತುತ ಬೆಳಗಾವಿ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ್ ಬಿ ನಿಂಬರ್ಗಿಯವರನ್ನು ಸತತವಾಗಿ ವಿನಂತಿ ಮಾಡಿತ್ತು. ಮನವಿಗೆ ಸ್ಪಂದಿಸಿದ ನಿಂಬರ್ಗಿ ಎಲ್ಲಾ 30 ಪ್ರಯಾಣಿಕರಿಗೆ ಕೊಲಾಪುರದಲ್ಲಿ ರಾತ್ರಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು ಅಲ್ಲದೆ ಉಡುಪಿ ಜಿಲ್ಲಾಡಳಿತ ಪರವಾನಿಗೆ ನೀಡಿದರೆ ಗರ್ಭಿಣಿ ಮತ್ತು ವೃದ್ಧರಿಗೆ ಉಡುಪಿಗೆ ಕಳುಹಿಸಲು ವ್ಯವಸ್ಥೆಗೊಳಿಸುವುದಾಗಿ ಹೇಳಿದ್ದರು.
ರಾಜ್ಯ ಸರಕಾರ ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶ ನಿಷೇಧಿಸಿದ್ದರಿಂದ ಉಡುಪಿ ಜಿಲ್ಲಾಧಿಕಾರಿ ತಮ್ಮ ಅಸಾಹಯಕತೆಯನ್ನು ವ್ಯಕ್ತಪಡಿಸಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ –ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸತತವಾಗಿ ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದರಿಂದ ಮುಖ್ಯಮಂತ್ರಿಗಳು ಪ್ರಥಮ ಹಂತದಲ್ಲಿ ಗರ್ಭಿಣಿ ಮಹಿಳೆ, ತಾಯಿ ಮಗು ಹಾಗೂ ವೃದ್ಧರು ಸೇರಿ ಐದು ಮಂದಿಯನ್ನು ಮಾತ್ರ ಸ್ವತಃ ಬೆಳಗಾವಿ ಪೊಲೀಸರ ವಾಹನದಲ್ಲಿ ಕಳುಹಿಸಿಕೊಡಲಾಗಿದೆ. ಉಳಿದ ಪ್ರಯಾಣಿಕರನ್ನು ಹೆಲ್ತ್ ಚೆಕ್ ಅಪ್ ಮಾಡಿ ಬಳಿಕವಷ್ಠೆ ರಾಜ್ಯದ ಗಡಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿದ್ದು ಅದರ ಬಳಿಕವಷ್ಟೇ ಅವರುಗಳು ಉಡುಪಿಗೆ ಪ್ರಯಾಣಿಸಲು ಸಾಧ್ಯ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮ್ಯಾಂಗಲೋರಿಯನ್ ಗೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಸಚಿವರು, ಸಂಸದರು ಹಾಗೂ ಮಾಧ್ಯಮ ಮಿತ್ರರ ಸತತ ಒತ್ತಡದಿಂದ ಸರಕಾರ ಮಾನವೀಯ ನೆಲೆಯಲ್ಲಿ ತಮ್ಮ ಹುಟ್ಟೂರಿಗೆ ಆಗಮಿಸಲು ಅವಕಾಶ ನೀಡಿದ್ದು ಸಮಸ್ಯೆ ಪರಿಹರಿಸಲು ಸಹಕರಿಸಿದ ಸರ್ವರಿಗೂ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.