ನಿಯಮ ಮೀರಿ ವರ್ಗಾವಣೆ: ಪಿಎಸ್ಐ ಮನವಿ ಪುರಸ್ಕರಿಸಿದ ಕೋರ್ಟ್; ಮತ್ತೆ ಗಂಗೊಳ್ಳಿ ಠಾಣೆಗೆ ಹರೀಶ್ ಆರ್ ನಾಯ್ಕ್!

Spread the love

ನಿಯಮ ಮೀರಿ ವರ್ಗಾವಣೆ: ಪಿಎಸ್ಐ ಮನವಿ ಪುರಸ್ಕರಿಸಿದ ಕೋರ್ಟ್; ಮತ್ತೆ ಗಂಗೊಳ್ಳಿ ಠಾಣೆಗೆ ಹರೀಶ್ ಆರ್ ನಾಯ್ಕ್!

ಕುಂದಾಪುರ: ಕಳೆದ‌ ಒಂದು ವರ್ಷಗಳಿಂದ ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಯಶಸ್ವಿ ಸೇವೆ ಸಲ್ಲಿಸಿ ಒಂದು ವಾರಗಳ ಹಿಂದಷ್ಟೇ ವರ್ಗಾವಣೆಗೊಂಡಿದ್ದ ಪಿಎಸ್ಐ ಹರೀಶ್ ಆರ್ ನಾಯ್ಕ್ ಇಲಾಖೆಯೊಳಗೆ ನಡೆದ ತುರ್ತು ಬೆಳವಣಿಗೆಯೊಂದರಲ್ಲಿ ಮತ್ತೆ ಗಂಗೊಳ್ಳಿ ಠಾಣೆಯಲ್ಲಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ‌.

ಎರಡು ವರ್ಷದೊಳಗೆ ವರ್ಗಾವಣೆ ಮಾಡುವ ಆದೇಶ ಇಲ್ಲದಿದ್ದರೂ ನಿಯಮ‌ ಮೀರಿ ರಾಜಕೀಯ‌ ಒತ್ತಡಗಳಿಂದ ಮಾಡಿರುವ ತಮ್ಮ ವರ್ಗಾವಣೆ ಆದೇಶದ ವಿರುದ್ದ ಹರೀಶ್ ಆರ್ ನಾಯ್ಕ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಮತ್ತೆ ಅದೇ ಠಾಣೆಯಲ್ಲಿ ಮುಂದುವರೆಯುವಂತೆ ಆದೇಶ ನೀಡಿದ‌ ಹಿನ್ನೆಲೆ‌ ಮಂಗಳವಾರ ಮತ್ತೆ ಗಂಗೊಳ್ಳಿ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

ಒಂದು ವರ್ಷದಲ್ಲೇ ದಕ್ಷ ಪೊಲೀಸ್ ಅಧಿಕಾರಿ ಹರೀಶ್ ಆರ್ ನಾಯ್ಕ್ ಅವರನ್ನು ವರ್ಗಾವಣೆಗೊಳಿಸಿರುವ ಆದೇಶದ ವಿರುದ್ದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹರೀಶ್ ಆರ್ ನಾಯ್ಕ್ ಗಂಗೊಳ್ಳಿ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ‌ ಬಳಿಕ ಒಂದಷ್ಟು ಬದಲಾವಣೆಗಳನ್ನು ತಂದಿದ್ದಲ್ಲದೇ, ಅತೀ‌ ಹೆಚ್ಚು ಹಿಂದೂ, ಮುಸ್ಲಿಮರೇ ವಾಸಿಸುವ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಕೋಮು ಸಂಘರ್ಷಗಳು‌ ನಡೆಯದಂತೆ ಎಚ್ಚರಿಕೆ ವಹಿಸಿ ಅನೇಕ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದರು. ಜನಸ್ನೇಹಿ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದ ಹರೀಶ್ ಆರ್ ನಾಯ್ಕ್ ಅವರ ವರ್ಗಾವಣೆಯ ಆದೇಶದ ವಿರುದ್ದ ಸ್ಥಳೀಯ ಮುಖಂಡರು ಕಿಡಿಕಾರಿದ್ದರು.

ಹರೀಶ್ ಆರ್ ನಾಯ್ಕ್ ವರ್ಗಾವಣೆಯ ಬಳಿಕ‌ ಉಡುಪಿ ಸೆನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ನಾಯ್ಕ್‌ ಅವರನ್ನು ಗಂಗೊಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಹರೀಶ್ ಆಗಮನದ ಬಳಿಕ‌ ಪವನ್ ನಾಯ್ಕ್ ಅವರಿಗೆ ಪಶ್ಚಿಮ ವಲಯ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.


Spread the love