Home Mangalorean News Kannada News ನಿರಂತರ ಓದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ: ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯ

ನಿರಂತರ ಓದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ: ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯ

Spread the love

ನಿರಂತರ ಓದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತದೆ: ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯ

ಕುಂದಾಪುರ: ನಾಯಕನಾಗಿ ಬೆಳೆಯುವವನಿಗೆ ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಜ್ಞಾನವೂ ಇರಬೇಕು. ಆಗ ಮಾತ್ರ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ನಿರಂತರ ಓದು ಭವಿಷ್ಯವನ್ನು ರೂಪಿಸುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.

ಅವರು ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ (ರಿ) ಕುಂದಾಪುರ ಆಡಳಿತದ ಲಿಟ್ಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿಯಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಪರಿಷತ್ ಪ್ರದಗ್ರಹಣ ಹಾಗೂ ಕಾನೂನು ಅರಿವು ಸಮಾರಂಭದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ, ರಾಜಪ್ರಭುತ್ವ, ನಿರಂಕುಶ ಪ್ರಭುತ್ವ ಈ ಮೂರು ಸ್ಥರದ ಆಡಳಿತ ವ್ಯವಸ್ಥೆಗಳು ಜಗತ್ತಿನಲ್ಲಿವೆ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಸಂವಿಧಾನ, ಶಾಲೆಗಳಲ್ಲಿ ಶಾಲಾ ಸರ್ಕಾರ ರಚನೆ‌ ಮಾಡುವುದರಿಂದ ನಮ್ಮ ಆಡಳಿತ ವ್ಯವಸ್ಥೆಗಳ ಕುರಿತು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಹೆಚ್ಚುತ್ತದೆ.‌ ಬುದ್ದಿವಂತರು ಇಡೀ ಜಗತ್ತನ್ನು ಆಳುತ್ತಾರೆ. ಹೀಗಾಗಿ ಗ್ರಾಮೀಣ ಪ್ರದೇಶದ ಸುದ್ದಿಗಳಿಂದ‌ ಹಿಡಿದು ಇಡೀ ಜಗತ್ತಿನ ಸುದ್ದಿಗಳನ್ನು ಓದಬೇಕು. ಓದುವವರು ಸಾಮ್ರಾಜ್ಯವನ್ನೇ ಕಟ್ಟಬಹುದು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ & ಗೈಡ್ಸ್ ನ ಜಿಲ್ಲಾ ಚೀಫ್ ಕಮಿಷನರ್ ಜಯಕರ ಶೆಟ್ಟಿ‌ ಇಂದ್ರಾಳಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ, ನಾಯಕತ್ವ ಮೈಗೂಡಿಸಿಕೊಳ್ಳುವ ಸಲುವಾಗಿ ಮಂತ್ರಿಮಂಡಲ ರಚನೆ ಮಾಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಚಾರಗಳ ಬಗ್ಗೆ ಗುರಿ, ಕನಸು ಇಟ್ಟುಕೊಳ್ಳಬೇಕು. ವಿದ್ಯೆ ಎಂದರೆ ಪಾಠ ಪ್ರವಚನ ಮಾತ್ರವಲ್ಲ‌. ಪಠ್ಯೇತರ ಚಟುವಟಿಗಳಲ್ಲೂ ವಿದ್ಯಾರ್ಥಿಗಳು ಗಮನಹರಿಸಬೇಕು. ದಿನಪತ್ರಿಕೆಗಳನ್ನು ಹೆಚ್ಚೆಚ್ಚು ಓದುವ ಮೂಲಕ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಕೇವಲ ಅಂಕ ಗಳಿಸುವುದು ಮಾತ್ರ ಜೀವನವಲ್ಲ. ಅಂಕ ಗಳಿಸುವುದರ ಜೊತೆಗೆ ಜೀವನ ಪಾಠವನ್ನು ಕಲಿಯಬೇಕು. ಮಂತ್ರಿ ಮಂಡಲ ರಚನೆಯೊಂದಿಗೆ ತಮ್ಮ ಜೀವನದಲ್ಲಿ ಶಿಸ್ತು, ಜವಾಬ್ದಾರಿ, ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ನ‌ ಅಧ್ಯಕ್ಷ ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ, ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ‌ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ ಉಪಸ್ಥಿತರಿದ್ದರು.

ನೂತನವಾಗಿ ಆಯ್ಕೆಯಾದ ಮಂತ್ರಿಮಂಡಲದ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕಿ ಸಪ್ತಮಿ ಧನ್ಯವಾದವಿತ್ತರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version