ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸಿ: ಡಿ.ಸಿ ಸಸಿಕಾಂತ್ ಸೆಂಥಿಲ್ 

Spread the love

ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸಿ: ಡಿ.ಸಿ ಸಸಿಕಾಂತ್ ಸೆಂಥಿಲ್ 

ಮಂಗಳೂರು : ನಿವೃತ್ತ ಸರಕಾರಿ ನೌಕರರು ತಮ್ಮ ಜೀವನ ನಿರ್ವಹಣೆಗಾಗಿ ಪಿಂಚಣಿಯನ್ನು ಅವಲಂಬಿಸಿದ್ದು, ಪಿಂಚಣಿಯನ್ನು ಸಕಾಲದಲ್ಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮಂಜೂರಾತಿ ಮಾಡಬೇಕು ಎಂದು ಪಿಂಚಣಿ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್ ಸಭೆಯಲ್ಲಿ ಮಾತನಾಡಿದ ಇವರು, ನಿವೃತ್ತ ಸರ್ಕಾರಿ ನೌಕರರಿಗೆ ಪಿಂಚಣಿ ಸಕಾಲದಲ್ಲಿ ಸಿಗುವಂತೆ ಹಾಗೂ ಹಳೆಯ ವೇತನ ಶ್ರೇಣಿಯನ್ನು ಕೈ ಬಿಟ್ಟು ಹೊಸ ವೇತನ ಶ್ರೇಣಿಯ ಪ್ರಕಾರ ಪಿಂಚಣಿ ದೊರಕುವಂತಾಗಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆದೇಶ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬ್ಯಾಂಕ್‍ಗಳ ವ್ಯವಸ್ಥಾಪಕರಿಗೆ ಎರಡು ವಾರದೊಳಗಾಗಿ ಪಿಂಚಣಿಯ ಕುರಿತು ಸರಿಯಾದ ಮಾಹಿತಿಯನ್ನೊಳಗೊಂಡ ಒಂದು ಸುತ್ತಿನ ಕಾರ್ಯಗಾರ ನಡೆಸಿ, ನೀತಿ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಎಂದು ಲೀಡ್ ಬ್ಯಾಂಕ್ ಅಧಿಕಾರಿಗೆ ಆದೇಶ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿವೃತ್ತ ನೌಕರರಿಗೆ ಸಂಬಂಧಿಸಿದ ಪಿಂಚಣಿ ಕಡತಗಳನ್ನು ಸಮರ್ಪಕವಾಗಿ ಕಳುಹಿಸಿಕೊಡುತ್ತಿಲ್ಲ ಎಂಬ ದೂರುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನು ಮುಂದೆ ಎಚ್ಚರ ವಹಿಸಿ ಪಿಂಚಣಿ ಪಾವತಿ ಆದೇಶಗಳನ್ನು ಚೆಕ್‍ಲಿಸ್ಟ್ ಅನುಸಾರವಾಗಿ ಕಡತಗಳನ್ನು ಕಳುಹಿಸಿಕೊಡಬೇಕು ಇದೇ ವೇಳೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಪಿಂಚಣಿಗಳಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾದಿಕಾರಿಗಳು ಮತ್ತು ವಿವಿಧ ಇಲಾಖಾಧಿಕಾರಿಗಳು. ಬ್ಯಾಂಕ್‍ಗಳ ಮುಖ್ಯಸ್ಥರು, ನಿವೃತ್ತ ನೌಕರರು ಉಪಸ್ಥಿತರಿದ್ದರು.


Spread the love