Home Mangalorean News Kannada News ನಿವೇಶನ ಕುರಿತ ಕಡತ ವಿಲೆಗೆ ಸಮಯಮಿತಿ ನಿಗದಿಪಡಿಸಿ- ಪ್ರಮೋದ್ ಮಧ್ವರಾಜ್

ನಿವೇಶನ ಕುರಿತ ಕಡತ ವಿಲೆಗೆ ಸಮಯಮಿತಿ ನಿಗದಿಪಡಿಸಿ- ಪ್ರಮೋದ್ ಮಧ್ವರಾಜ್

Spread the love

ನಿವೇಶನ ಕುರಿತ ಕಡತ ವಿಲೆಗೆ ಸಮಯಮಿತಿ ನಿಗದಿಪಡಿಸಿ- ಪ್ರಮೋದ್ ಮಧ್ವರಾಜ್

ಉಡುಪಿ:  ಅಕ್ರಮ ಸಕ್ರಮ, 94 ಸಿ, ನಿವೇಶನ ಗುರುತಿಸುವಿಕೆ ಕುರಿತು ಅಭಿಪ್ರಾಯ ಕೋರಿ ಕಂದಾಯ ಇಲಾಖೆಯಿಂದ ಸಲ್ಲಿಸುವ ಕಡತಗಳನ್ನು ಒಂದು ತಿಂಗಳ ಒಳಗೆ ವಿಲೇವಾರಿ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.

ಅವರು ಗುರುವಾರ ಬೈಂದೂರಿನ ಜೆ ಎನ್ ಆರ್ ಕಲಾಮಂದಿರದಲ್ಲಿ ನಡೆದ ಬೈಂದೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು

ಕಂದಾಯ ಇಲಾಖೆಯಿಂದ ಭೂಮಿ ಮಂಜೂರು ಮಾಡುವ ಕುರಿತಂತೆ ಅರಣ್ಯ ಇಲಾಖೆಯ ಅಭಿಪ್ರಾಯ ಕೋರಿ ಸಲ್ಲಿಸಲಾಗುತ್ತಿರುವ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದರಿಂದ ಅರ್ಹ ಫಲಾನುಭವಿಗಳಿಗೆ  ಹಕ್ಕುಪತ್ರಗಳನ್ನು ವಿತರಿಸಲು ತೊಂದರೆಯಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಡತದ ಕುರಿತು ತಮ್ಮ ಅಭಿಪ್ರಾಯವನ್ನು ಒಂದು ತಿಂಗಳ ಒಳಗೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಮಯದಲ್ಲಿ ಭೂಮಿ ಕಳೆದುಕೊಂಡವರಿಗೆ ವಿತರಿಸುವ ಪರಿಹಾರದಲ್ಲಿ ಲೋಪವಾಗಿದೆ ಎಂದು ಅಹವಾಲು ಸಲ್ಲಿಸಿದ ನಾಗರಿಕರ ಸಮಸ್ಯೆ ಕುರಿತಂತೆ ಕುಂದಾಪುರ ಮತ್ತು ಕಾರವಾರ ವಿಭಾಗದ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಿ, ಸಂತ್ರಸ್ತರ ಮನವಿಯನ್ನು ಆಲಿಸಿ, ಸೂಕ್ತ ಪರಿಹರ ನೀಡಲು ಕ್ರಮ ಕೈಗೊಳ್ಳುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

     ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಔಷಧಗಳ ಕೊರತೆ ಕುರಿತು ಸಲ್ಲಿಸಿದ ಅಹವಾಲು ಕುರಿತಂತೆ,  ಇಂದೇ ಆಸ್ಪತ್ರೆಗೆ  ಭೇಟಿ ನೀಡಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

 ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ನಿವೇಶನ ನೀಡುವ ಕುರಿತಂತೆ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದ ಸಚಿವರು, ಬೈಂದೂರು ವ್ಯಾಪ್ತಿಯಲ್ಲಿ ಅಗತ್ಯವಿರುವೆಡೆಯಲ್ಲಿ ಸರ್ಕಾರಿ ಬಸ್ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು  ಹೇಳಿದರು.

 ಕಾರ್ಯಕ್ರಮದಲ್ಲಿ ಮರುಳುಗಾರಿಕೆ ಅನುಮತಿ, ಸಿಆರ್‍ಝಡ್ ವ್ಯಾಪ್ತಿ, ನಿವೇಶನ ವಿತರಣೆ ಯ ಕುರಿತಂತೆ ಹಲವು ಮನವಿಗಳು ಸಲ್ಲಿಕೆಯಾದವು.

  ಮುಖ್ಯಮಂತ್ರಿಗಳ ಸೂಚನೆಯಂತೆ, ಜನರ ಬಳಿಗೆ ತೆರಳಿ ಸೇವೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಉಡುಪಿ ಕ್ಷೇತ್ರದಲ್ಲಿ 70 ಜನ ಸಂಪರ್ಕ ಸಭೆಗಳನ್ನು ನಡಸಿದೆ, ಉಡುಪಿಯಿಂದ ಹೊರಗೆ 20 ಕ್ಕೂ ಹೆಚ್ಚು ಜನಸಂಪರ್ಕ ಸಭೆಗಳನ್ನು ನಡೆಸಿ, ಜನರ ಬಳಿಗೆ ಅಧಿಕಾರಿಗಳನ್ನು ಕರೆದೊಯ್ದು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ,

ಸರ್ಕಾರ ಬಡವರ, ದಲಿತರ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದವರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ, ಉಡುಪಿ ಜಿಲ್ಲೆಯಲ್ಲಿ ಇದುವರೆವಿಗೂ 66,000 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ,  94 ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ, ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ವಿದ್ಯುತ್ ಸಂಪರ್ಕ, ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ, ಪಂಗಡದವರಿಗೆ 2 ಲಕ್ಷ ಹಾಗೂ ಹಿಂದುಳಿದ ವರ್ಗದವರಿಗೆ 1.5 ಲಕ್ಷ ನೀಡಲಾಗುತ್ತಿದೆ, ಅಲ್ಲದೇ ಉದ್ಯೋಗ ಖಾತರಿ ಯೋಜನೆಯಡಿ ಬಾವಿ ನಿರ್ಮಾಣ, ಹಟ್ಟಿ ನಿರ್ಮಾಣ ಅನುದಾನ ನೀಡಲಾಗುತ್ತಿದೆ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಶೂ ಭಾಗ್ಯದ ಮೂಲಕ ನೆರವು, ಅಲ್ಲದೆ ಜಿಲ್ಲೆಯಲ್ಲಿ ರಸ್ತೆಗಳು, ಸೇತುವೆಗಳ ನಿರ್ಮಾಣ ಮಾಡಲಾಗುತ್ತಿದ್ದು, ಜನ ಜೀವನ ಸುಗಮಗೊಳಿಸಲು ಹಲವು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಸಚಿವರು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಹಾಗೂ ಕರ್ನಾಟಕ ರಾಜ್ಯ .ರಸ್ತೆ.ಸಾರಿಗೆ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ಮಾತನಾಡಿ, ಕಂದಾಯ ಮತ್ತು ಪಿಂಚಣಿ ಅದಾಲತ್ ಮೂಲಕ ಜನ ಸಾಮಾನ್ಯರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲಾಗಿದೆ, ಆಶ್ರಯ ಸಾಲ ಮನ್ನಾ ಮಾಡಲಾಗಿದೆ, ಡಿಸೆಂಬರ್ ನಿಂದ ಅನಿಲ ಭಾಗ್ಯ ಯೋಜನೆಯ ಮೂಲಕ ಗ್ಯಾಸ್ ಸಿಲೆಂಡರ್ ಹಾಗೂ ಸ್ಟೌವ್ ವಿತರಣೆ ನಡೆಯಲಿದೆ, ಬೈಂದೂರು ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್ ಅಡಿ 2500 ಕ್ಕೂ ಹೆಚ್ಚು ಕಡತಗಳು ಬಾಕಿ ಇದ್ದು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸಚಿವರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಸಿಇಓ ಶಿವಾನಂದ ಕಾಪಶಿ, ಅಡಿಶನಲ್ ಎಸ್‍ಪಿ  ಕುಮಾರ್ ಚಂದ್ರ , ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  ಕಂದಾಯ ಇಲಾಖೆಯಿಂದ 1000 ಮಂದಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಇಲಾಖೆಯ ಸವಲತ್ತುಗಳನ್ನು ಸಚಿವರು ವಿತರಿಸಿದರು.


Spread the love

Exit mobile version