ನಿಷೇಧಾಜ್ಞೆಯ ನಡುವೆ ಪ್ರತಿಭಟನೆ ಸಂಸದರಾದ ಶೋಭಾ, ನಳಿನ್ ಮೇಲೆ ಎಫ್ಐಆರ್ ದಾಖಲು
ಮಂಗಳೂರು: ನಿಷೇಧಾಜ್ಞೆ ಇದ್ದರೂ ನಿನ್ನೆ ಜಿಲ್ಲೆಯ ಬಂಟ್ವಾಳ ಪಟ್ಟಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆಂಬ ಕಾರಣಕ್ಕೆ ಬಿಜೆಪಿಯ ಇಬ್ಬರು ಸಂಸದರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರ್ಎಸ್ಎಸ್ ಮುಖಂಡ ಶರತ್ ಅವರ ಮೇಲಿನ ಹತ್ಯೆ ಯತ್ನ ಖಂಡಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳು ಬಂಟ್ವಾಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದವು.
ಜು.4ರಂದು ಶರತ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಶುಕ್ರವಾರ ಸಂಜೆ ಈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಬಂಟ್ವಾಳ, ಕಲ್ಲಡ್ಕ ಮತ್ತಿತರ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಶುಕ್ರವಾರ ಬೆಳಗ್ಗೆ ಬಂಟ್ವಾಳದಲ್ಲಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಮೆರವಣಿಗೆಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ಕುಮಾರ್ ಕಟಿಲ್ ಪಾಲ್ಗೊಂಡಿದ್ದರು. ನಿಷೇಧಾಜ್ಞೆ ಇದ್ದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟಿಲ್ ವಿರುದ್ಧ ಬಂಟ್ವಾಳ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 143, 149ರ ಅನ್ವಯ ಎಫ್ಐಆರ್ ದಾಖಲಿಸಿದ್ದಾರೆ.