ನೀಟ್-ಪಿಜಿ ಅಕ್ರಮ; ಭಾನುವಾರ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Spread the love

ನೀಟ್-ಪಿಜಿ ಅಕ್ರಮ; ಭಾನುವಾರ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ನವದೆಹಲಿ: ನೀಟ್ -ಪಿಜಿ  ಅಕ್ರಮದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಾಳೆ (ಜೂನ್ 23) ನಡೆಯಬೇಕಿದ್ದ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಇಂದು ಖಚಿತಪಡಿಸಿದೆ.

ಪರೀಕ್ಷೆಯ ಹೊಸ ದಿನಾಂಕವನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. NEET-UG ಫಲಿತಾಂಶ ಮತ್ತು UCG-NET ಪರೀಕ್ಷೆಯ ರದ್ದತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರತೆಯ ಬಗ್ಗೆ ಇತ್ತೀಚಿನ ಆರೋಪಗಳ ಘಟನೆಗಳನ್ನು ಪರಿಗಣಿಸಿ, ಆರೋಗ್ಯ ಸಚಿವಾಲಯವು ವೈದ್ಯಕೀಯ ವಿದ್ಯಾರ್ಥಿಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ನಡೆಸುವ NEET-PG ಪ್ರವೇಶ ಪರೀಕ್ಷೆಯ ಪ್ರಕ್ರಿಯೆಗಳ ದೃಢತೆಯ ಸಂಪೂರ್ಣ ಮೌಲ್ಯಮಾಪನವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ” ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಅಂದರೆ ಜೂನ್ 23ರಂದು ನಡೆಯಲಿರುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉಂಟಾದ ಅನಾನುಕೂಲತೆಗಾಗಿ ಆರೋಗ್ಯ ಸಚಿವಾಲಯವು ಪ್ರಾಮಾಣಿಕವಾಗಿ ವಿಷಾದಿಸುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ 2 ತಿಂಗಳುಗಳಲ್ಲಿ, ದೇಶದ 2 ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ ಮತ್ತು ನೆಟ್​ನಲ್ಲಿ ಅಕ್ರಮಗಳು ಮತ್ತು ಪೇಪರ್ ಸೋರಿಕೆಗಳ ಕುರಿತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸತತವಾಗಿ ಮಧ್ಯಪ್ರವೇಶಿಸಿತ್ತು. ಇದೀಗ ಎನ್​ಟಿಎ ಮುಖ್ಯಸ್ಥ ಸುಬೋಧ್ ಕುಮಾರ್ ಸಿಂಗ್ ಅವರನ್ನು ಕೂಡ ವಜಾಗೊಳಿಸಲಾಗಿದೆ.

ಈಗಾಗಲೇ ನೀಟ್, ನೆಟ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಗೇ, ಜುಲೈ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.


Spread the love