ನೀತಿ ಸಂಹಿತೆಯ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಉಡುಪಿ: ಚುನಾವಣಾ ನೀತಿ ಸಂಹಿತೆಯ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ಗುರುವಾರ ನಗರದ ಬೀಡಿನಗುಡ್ಡೆ ಮಹಾತ್ಮಾಗಾಂಧಿ ಬಯಲು ರಂಗಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಪರೇಡ್ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು ಕನ್ನಡ ಭಾಷೆಯ ನೆಲೆಗಟ್ಟಿನಲ್ಲಿ ಏಕೀಕರಣಗೊಂಡ ಕನ್ನಡ ನಾಡು ಅತ್ಯಂತ ವಿಶಿಷ್ಟವಾದ ಸಂಸ್ಕೃತಿ ಕಲೆ ಮತ್ತು ಪರಂಪರೆಗೆ ನೆಲೆಯಾಗಿದೆ. ಕನ್ನಡವೆಂದರೆ ಬರಿ ನುಡಿಯಲ್ಲ ಅದು ಜೀವನದ ಅರ್ಥ ಎಂಬ ಕವಿವಾಣಿಯಂತೆ ಇಲ್ಲಿನ ಭಾಷೆ, ಪರಂಪರೆ, ಕಲೆ ಮತ್ತು ಸಾಹಿತ್ಯ ಸಂಸ್ಕೃತಿಗಳೆಲ್ಲವೂ ಕನ್ನಡಮಯವೇ. ಇಲ್ಲಿ ಆಳಿದ ನೂರಾರು ರಾಜಮನೆತನಗಳು, ಕನ್ನಡ ನಾಡಿನ ಶಿಲ್ಪ, ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಪರಂಪರೆಗಳನ್ನು ಪೋಷಿಸಿವೆ. ನಾಡಿನ ಪ್ರತಿಯೊಬ್ಬ ಪ್ರಜೆಯೂ ಭಾವೈಕತೆ, ನಾಡಪ್ರೇಮ ಮತ್ತು ದೇಶಪ್ರೇಮವನ್ನು ಹೊಂದಿ ಈ ನಾಡಿನ ಸಮಗ್ರ ಅಭಿವೃದ್ಧಿಗೆ ತಮ್ಮ ಸಮಯವನ್ನು ಮೀಸಲಿಡಲು ಶ್ರಮಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಶಿವಾನಂದ ಕಾಪಾಶಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅದ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.