ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಸುನಿಲ್ ಕುಮಾರ್ ವಿರುದ್ಧದ ಕೇಸು ರದ್ದು
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧದ ಮೂರು ಕೇಸುಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸುನಿಲ್ ಕುಮಾರ್ ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿ ಆಲಿಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯಪೀಠ ಗುರುವಾರ ಈ ಆದೇಶ ನೀಡಿದೆ.
ದೇವಾಲಯ ಹಾಗೂ ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಭೋಜನ ನೀಡಿದರೆ ಅದು ಮತದಾರರಿಗೆ ಆಮಿಷ ಒಡ್ಡಿದಂತಾಗುವುದಿಲ್ಲ ಮತ್ತು ಅದು ಮತದಾರರ ಮೇಲೆ ಪ್ರಭಾವ ಬೀರಿದಂತಾಗುವುದಿಲ್ಲವೆಂದು ಚುನಾವಣಾ ಆಯೋಗವೇ ಹೇಳಿದೆ. ಹಾಗಾಗಿ ಅರ್ಜಿದಾರರ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲರು, ಬಹುತೇಕ ದೇವಾಲಯಗಳಲ್ಲಿ ಹಲವಾರು ವರ್ಷಗಳಿಂದ ಭಕ್ತರಿಗೆ ದಿನವೂ ಅನ್ನಸಂತರ್ಪಣೆ ಮಾಡಲಾಗುತ್ತದೆ. ಅದಕ್ಕೂ ಚುನಾವಣಾ ರಾರಯಲಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಶಾಸಕ ಸುನೀಲ್ ಕುಮಾರ್ ಅವರು ಪಕ್ಷದ ಕಾರ್ಯಕರ್ತರಿಗೆ ದೇವಾಲಯಗಳಲ್ಲಿ ಊಟ ಹಾಕಿಸಿದ ಆರೋಪದ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.