‘ನೀರಿಗಾಗಿ ಅರಣ್ಯ’ ಜನಜಾಗೃತಿ ಮುಖ್ಯ – ಅರಣ್ಯ ಸಚಿವ ರಮಾನಾಥ ರೈ
ಉಡುಪಿ : ಕಾಡು ಉಳಿಸುವುದು ಎಲ್ಲರ ಕರ್ತವ್ಯ; ಅರಣ್ಯ ಸಂರಕ್ಷಣೆಗೂ ಜೀವ ಜಲಕ್ಕೂ ಅವಿನಾಭಾವ ಸಂಬಂಧ. ಜೀವ ಜಲಕ್ಕೆ ಕಾಡೇ ಮೂಲ. ಎಲ್ಲಾ ನದಿಗಳ ಉಗಮವೂ ಕಾಡಿನಲ್ಲೇ, ಜಾಗತಿಕ ತಾಪಮಾನ ತಡೆಗೆ, ಮೋಡಗಳು ನೀರಾಗಿ ಮಳೆಯಾಗಲು ಮರಗಳು ಬೇಕು ಎಂದು ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮಾನಾಥ ರೈ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ನೀರಿಗಾಗಿ ಅರಣ್ಯ-2017 ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆಗೆ, ಕಾಡುಪ್ರಾಣಿಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ಜನಜಾಗೃತಿಯಿಂದ ಮಾತ್ರ ಕಾಡುಗಳನ್ನು ಉಳಿಸಲು ಸಾಧ್ಯ. ಈ ಸಂಬಂಧ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ರೈತರು ಸದ್ಬಳಕೆ ಮಾಡಬೇಕು. ಸರಕಾರವು ಕೃಷಿಕರ ಪರವಾಗಿದ್ದು, ರೈತರಿಗೆ, ಗ್ರಾಮೀಣ ಜನರಿಗೆ ತೊಂದರೆಯಾಗದಂತೆ ಅರಣ್ಯ ಒತ್ತುವರಿಯನ್ನು ತಡೆಯಲಾಗುತ್ತಿದೆ.
ನಮ್ಮ ಸರಕಾರ ಜನ ಪರವಾಗಿದ್ದು, ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ, ಹುಲಿ ಯೋಜನೆಯ ಬಗ್ಗೆ ಅತ್ಯಂತ ಎಚ್ಚರ ವಹಿಸಿ ಕ್ರಮ ಕೈಗೊಳ್ಳುತ್ತಿದೆ. ಅರಣ್ಯ ಸಂರಕ್ಷಣೆ ಕಾಯ್ದೆ ಅನುಷ್ಠಾನದಿಂದ ಅರಣ್ಯೇತರ ಉದ್ದೇಶಕ್ಕೆ ಬಳಸಲಾದ ಭೂಮಿ ಅತ್ಯಂತ ಕಡಿಮೆ. ಮರಗಳ ಸಂರಕ್ಷಣೆಯ ಉದ್ದೇಶದಿಂದಲೇ ಜಿಲ್ಲೆಯಲ್ಲಿ ಈಗಾಗಲೇ 3500 ಗ್ಯಾಸ್ ಸಂಪರ್ಕವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ನೀರಿಗಾಗಿ ಯುದ್ಧ ಎಂಬ ಭವಿಷ್ಯವಾಣಿ ಹುಸಿಯಾಗಲು ಮರ ನೆಡುವ ಮೂಲಕ ಜೀವ ಜಲದ ಸಂರಕ್ಷಣೆಯಾಗಲಿ, ಉಡುಪಿಯಂತಹ ಜಿಲ್ಲೆಗಳಲ್ಲೇ ಬೇಸಿಗೆಯಲ್ಲಿ ಜನರಿಗೆ ನೀರು ಪೂರೈಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಸ್ಮರಿಸಿದ ಅವರು ಹಸಿರು ಪ್ರೇಮ ನೀರಿನ ಸಮಸ್ಯೆಗೆ ಇತಶ್ರಿ ಹಾಡಲಿದೆ ಎಂದರು.
ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಲೂಕು ಪಂಚಾಯತ್ ಅಧ್ಯಕ್ಷರು ನಳಿನಿ ಪ್ರದೀಪ್ ರಾವ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುನಾಟಿ ಶ್ರೀಧರ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ಮಂಗಳೂರು ಡಿಸಿಎಫ್ ಕರಿಕಾಳನ್, ಉಡುಪಿ ಡಿಸಿಎಫ್ ಅಮರನಾಥ, ಮಣಿಪಾಲ ವಿವಿ ಕುಲಸಚಿವ ಡಾ. ಜಿ.ಕೆ.ಪ್ರಭು, ಉಡುಪಿ ವನ್ಯಜೀವಿ ಪರಿಪಾಲಕ ಎಮ್ ರವಿರಾಜ್ ನಾರಾಯಣ್, ಪ್ರೊ.ಎಸ್ ಬಾಲಕೃಷ್ಣ ಮದ್ದೋಡಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮೊದಲು ಸಿಸಿಎಫ್ ಸಂಜಯ್ ಬಿಜ್ಜೂರು ನೀರಿಗಾಗಿ ಅರಣ್ಯ ಮಕ್ಕಳಿಂದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು.