ನೀರಿನ ಅನುದಾನದ ಸದ್ಬಳಕೆ ವರದಿ ನೀಡಿ- ಕೆಡಿಪಿ ಸಭೆಯಲ್ಲಿ ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ತೆಗೆದುಕೊಂಡಿರುವ ಕ್ರಮ ಟಾಸ್ಕ್ ಫೋರ್ಸ್ ಮತ್ತು ಎನ್‍ಆರ್‍ಡಿಡಬ್ಲ್ಯುಪಿ(ನ್ಯಾಷನಲ್ ರೂರಲ್ ಡ್ರಿಂಕಿಂಗ್ ವಾಟರ್ ಸಪ್ಲೈ) ನಡಿ ಕೈಗೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಮುಗಿಸಿ ವರದಿ ನೀಡದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಇಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನೀರು ಸರಬರಾಜಿಗೆ ಸಂಬಂಧಿಸಿದಂತೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಿ ಅನುದಾನ ಅನುಷ್ಠಾನಕ್ಕೆ ಬಳಕೆಯಾದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವುದಾಗಿಯೂ ಸಚಿವರು ಹೇಳಿದರು.
ನೀರಿನ ಕೊರತೆ ಇರುವಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ನೀರಿನ ಕೊರತೆ ಬಗ್ಗೆ ವರದಿಯಾಗುತ್ತಿದೆ. ಸಾಕಷ್ಟು ಅನುದಾನ ನೀರಿಗಾಗಿ ನೀಡಿದ್ದರೂ ಸದ್ಬಳಕೆಯಾಗುತ್ತಿಲ್ಲದ ಬಗ್ಗೆ ಸಚಿವರು ಕಾರ್ಯನಿರ್ವಾಹಕ ಇಂಜಿನಿಯರ್ ನೀರು ಸರಬರಾಜು ಇವರಿಗೆ ಕಾರಣ ಕೇಳಿದರು.
ಶಿಕ್ಷಣ ಇಲಾಖೆ – ಆರ್ ಟಿ ಇ 1351 ಸೀಟು ಲಭ್ಯ ಇದ್ದು, 695 ದಖಲಾಗಿದೆ. ಎರಡನೇ ಹಂತದಲ್ಲಿ 130 ದಾಖಲು. ಇನ್ನೂ 400 ಸೀಟು ಬಾಕಿ ಇದೆ. ಮೂರನೇ ಹಂತದಲ್ಲಿ ಈ ಸೀಟುಗಳನ್ನು ಹಂಚಲಾಗುವುದು ಎಂದು ಡಿಡಿಪಿಐ ಹೇಳಿದರು.
ಆರ್ ಟಿ ಇ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ನೋ ಸ್ಕೂಲ್ ವಿಲೇಜ್ ಉಡುಪಿಯಲ್ಲಿ 3 ಇದ್ದು ಮಕ್ಕಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸಚಿವರು ಹೇಳಿದರು. ಮೂರನೇ ಸುತ್ತಿನಲ್ಲೂ ಆರ್ ಟಿ ಇ ಸೀಟುಗಳು ತುಂಬದಿದ್ದರೆ ಸರ್ಕಾರದ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಉಪನಿರ್ದೇಶಕರು ಹೇಳಿದರು. ಎಲ್ಲ ಮಕ್ಕಳಿಗೂ ಶೂವನ್ನೇ ಖರೀದಿಸಿ ನೀಡಬೇಕೆಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.
ವಾರಾಹಿ ಯೋಜನೆಯ ಸದ್ಬಳಕೆ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಜನೋಪಕಾರಿ ಯೋಜನೆಯಾಗಿ ಪರಿವರ್ತಿಸಲು ಜಿಲ್ಲಾ ಉಸ್ತುವಾರಿ ಸಚಿವರ ಪ್ರತ್ಯೇಕ ಸಭೆ ಕರೆಯಲು ಪ್ರತಾಪ್‍ಚಂದ್ರ ಶೆಟ್ಟಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ ಸಚಿವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವರ ನಿರ್ಲಕ್ಷ್ಯಗಳಿಂದಾಗುತ್ತಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರದವರ ವಿರುದ್ಧ ದೂರು ದಾಖಲಿಸಿ ಎಂದರು. ಈಗಾಗಲೇ ಸಂಬಂದಪಟ್ಟವರಿಗೆ ಮಾಹಿತಿ ನೀಡುವ ಮೂಲಕ ಸೈನ್ ಬೋಡ್ರ್ಸ ಮತ್ತು ಬ್ಯಾರಿಕೇಡ್‍ಗಳನ್ನಿರಿಸಿ ಅಪಘಾತ ತಡೆಗೆ ಕ್ರಮವಹಿಸಲಾಗಿದೆ; ಆದರೆ ಈವರೆಗೆ ನಡೆದ ಅಪಘಾತಗಳಿಂದ ಮೃತಪಟ್ಟವರ ಅಂಕಿ ಅಂಶಗಳು ತಮ್ಮ ಬಳಿ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.
ಜಿಲ್ಲಾಸ್ಪತ್ರೆ ಆವರಣ, ಕಿನ್ನಿಮುಲ್ಕಿ, ಕುಂದಾಪುರದಲ್ಲಿ ಜನರಿಕ್ ಔಷಧಿಗಳು ಲಭ್ಯವಿದೆ ಎಂದು ಡಿಹೆಚ್‍ಒ ಮಾಹಿತಿ ನೀಡಿದರು. ಜನರಿಗೆ ಔಷಧಿಗಳ ಲಭ್ಯತೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಬಡ ಜನರಿಗೆ ಎಲ್ಲ ಔಷಧಿಗಳು ಲಭ್ಯವಿರಬೇಕೆಂದು ಆದೇಶಿಸಿದರು.
ಬಿಪಿಎಲ್ ಕಾರ್ಡ್‍ಗಾಗಿ ಹೊಸದಾಗಿ 5.490 ಅರ್ಜಿಗಳು ಬಂದಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರಾದ ಸದಾಶಿವ ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಇಲಾಖೆ ಮಳೆಗಾಲದ ಬೆಳೆಗೆ ಸಜ್ಜಾಗಿದ್ದು, ರೈತಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ಲಭ್ಯವಿದೆ. ಗೊಬ್ಬರ, ಬೀಜಗಳಿಗೂ ಕೊರತೆ ಇಲ್ಲ ಎಂದ ಕೃಷಿ ಜಂಟಿ ನಿರ್ದೇಶಕರು, ಉಡುಪಿಗೆ 910 ಕ್ವಿಂಟಾಲ್, ಕುಂದಾಪುರಕ್ಕೆ 665 ಕ್ವಿಂಟಾಲ್, ಕಾರ್ಕಳಕ್ಕೆ 100 ಕ್ವಿಂಟಾಲ್ ಎಂಒ4 ಬೀಜ ಲಭ್ಯವಿದೆ ಎಂದು ವಿವರಿಸಿದರು. ಗೊಬ್ಬರಕ್ಕೂ ಯಾವುದೇ ತೊಂದರೆ ಇಲ್ಲ ಎಂದರು.
ಕೃಷಿ ಯಂತ್ರ ಬಾಡಿಗೆಯನ್ನು ಪಂಚಾಯಿತಿ ಮಟ್ಟದಲ್ಲಿ ಆರಂಭಿಸಿದರೆ ಕೃಷಿಕರಿಗೆ ನೆರವಾಗಲಿದೆ ಎಂದು ಪ್ರತಾಪ್‍ಚಂದ್ರ ಶೆಟ್ಟಿ ಹೇಳಿದರು. ಈಗಾಗಲೇ 7 ಹೋಬಳಿಗಳಲ್ಲಿ 9 ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರಗಳನ್ನು ನಡೆಸಲಾಗುತ್ತಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಗೆ 31 ಲಕ್ಷ ರೂ. ಅನುದಾನ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಳಕೆ ಮಾಡಲಾಗುವುದು ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು. ಹಾಲು ಉತ್ಪಾದಕರ ಪ್ರೋತ್ಸಾಹಧನ ಫೆಬ್ರವರಿ ವರೆಗೆ ನೀಡಲಾಗಿದೆ ಎಂದು ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ ಉತ್ತರಿಸಿದರು. ಜಿಲ್ಲೆಯಲ್ಲಿ ಪಶುಗಳಿಗೆ ಹಟ್ಟಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿ ಎಂದು ಉಪನಿರ್ದೇಶಕರಿಗೆ ಸೂಚಿಸಿದರು.
ಯಶಸ್ವಿನಿ ಯೋಜನೆ ಜಾರಿಯಲ್ಲಿದ್ದು ಎಲ್ಲ ಸೊಸೈಟಿಗಳಿಗೆ ಗುರಿ ನಿಗದಿಪಡಿಸಲಾಗಿದೆ ಎಂದು ಸಹಕಾರಿ ಇಲಾಖೆ ಅಧಿಕಾರಿ ಪ್ರವೀಣ್ ನಾಯಕ್ ಹೇಳಿದರು. ಯಶಸ್ವಿನಿ ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕೆಂದು ಸಚಿವರು ಕೆಡಿಪಿಯಲ್ಲಿ ಸೂಚನೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯಡಿ ಕಳೆದ ಸಾಲಿನಲ್ಲಿ 49 ಟ್ಯಾಕ್ಸಿ ವಿತರಿಸಲಾಗಿದೆ. ಈ ಸಾಲಿನಲ್ಲಿಯೂ ಗುರಿ ಸಾಧನೆ ಮಾಡಲಾಗಿದೆ ಎಂದರು. 751 ಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಮಾಡಿಸಲಾಗಿದೆ ಎಂದರು. ಮಲ್ಪೆ ಪಡುಕೆರೆಯನ್ನು ಟೂರಿಸ್ಟ್ ಹಬ್ ತರಹ ರೂಪಿಸಿ ಎಂದು ಅವರು ಸೂಚಿಸಿದರು.
ನಗರಾಭಿವೃದ್ಧಿ ಕೋಶದಡಿ ಉಡುಪಿ ನಗರಸಭೆಗೆ ಹತ್ತು ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದು, ಅನುದಾನ ಬಳಸಿಕೊಂಡು ಕೆಲಸವನ್ನು ತ್ವರಿತವಾಗಿ ಮಾಡಿ; ಸ್ಪಾಟ್ ಇನ್ಸ್ಪೆಕ್ಷನ್ ಮಾಡಿ ಎಂದ ಸಚಿವರು, ಪ್ರಗತಿಪರಿಶೀಲನೆ ನಡೆಸಿ ಎಂದರು. ಕಾಮಗಾರಿಗಳು ನಿಧಾನಗತಿಯಲ್ಲಿ ಮಾಡದೆ ಸ್ಪೀಡ್ ಅಪ್ ಮಾಡಿ,
ಸ್ವಚ್ಛ ಭಾರತ ಅಭಿಯಾನದಡಿ ಶೇ. 89 ಸಾಧನೆ ದಾಖಲಾಗಿದ್ದು,, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ 94 ಸಾಧನೆಯಾಗಿದೆ.
ಘನತ್ಯಾಜ್ಯ ವಿಲೇ ಜಿಲ್ಲೆಗೆ ಸವಾಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಮುಂದಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಶಾಲೆ, ಅಂಗನವಾಡಿ, ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ವಿವರಿಸಿದರು. ಜಿಲ್ಲೆಯ ಹಲವು ಉತ್ತಮ ಮಾದರಿಗಳ ಬಗ್ಗೆಯೂ ಅವರು ಸಭೆಗೆ ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಬ್ಯಾನ್ ಎಲ್ಲಿಗೆ ಬಂತು ಎಂಬ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಪೊಲ್ಯುಷನ್ ಕಂಟ್ರೋಲ್ ಬೋರ್ಡ್ ನವರು ಸಭೆಗೆ ಯಾಕೆ ಹಾಜರಾಗಿಲ್ಲ ಎಂದು ಸಚಿವರು ಕೇಳಿದರು.
ಗ್ರಾಮ ವಿಕಾಸ ಯೋಜನೆಯಡಿ, ಸುವರ್ಣಗ್ರಾಮ ಯೋಜನೆಯಡಿ ಹತ್ತುಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು ಅಕ್ಟೋಬರ್ ಒಳಗೆ ಗುರಿ ಸಾಧಿಸಿ ಎಂದು ಸಚಿವರು ಹೇಳಿದರು. ಕೆಆರ್‍ಐಡಿಎಲ್ ಮತ್ತು ಪಿಆರ್‍ಇಡಿ ಇಲಾಖೆ ಮುಂದಿನ ತಿಂಗಳೊಳಗೆ ಶೇ ನೂರು ಸಾಧನೆ ದಾಖಲಿಸಿ ಎಂದು ಸಚಿವರು ನಿರ್ದೇಶನ ನೀಡಿದರು.
ಉದ್ಯೋಗ ಖಾತರಿ ಯೋಜನೆಯಡಿ ತೆರೆದ ಬಾವಿ ಮತ್ತು ಹಟ್ಟಿ ನಿರ್ಮಾಣಕ್ಕೆ ಹೆಚ್ಚಿನ ಅವಕಾಶ ನೀಡಿ ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಒಂದು ಕ್ರಾಂತಿಯನ್ನೇ ತಾನು ನಿರೀಕ್ಷಿಸುವೆ. ಫಲಾನುಭವಿಗಳ ಆಯ್ಕೆ ಮತ್ತು ವೈಯಕ್ತಿಕ ಕೆಲಸ ನೀಡುವ ನಿಟ್ಟಿನಲ್ಲಿ ಪಿಡಿಒಗಳು ಸಕಾರಾತ್ಮಕವಾಗಿ ವರ್ತಿಸಬೇಕು. ಗುರಿ ನಿಗದಿ ಮತ್ತು ಸಾಧನೆ ಗಣನೀಯವಾಗಿರಬೇಕೆಂದ ಸಚಿವರು, ತೆರೆದ ಬಾವಿ ನಿರ್ಮಾಣಕ್ಕೆ 82,000 ರೂಗಳ ಎಸ್ಟಿಮೇಷನ್‍ಗೆ ಸೀಮಿತಗೊಳಿಸದೆ ಮಣ್ಣಿನ ಗುಣಲಕ್ಷಣ ನೋಡಿ ಪ್ರಸ್ತಾವನೆ ರೂಪಿಸಿ ಎಂದರು.
ಸಮಗ್ರವಾಗಿ ಉದ್ಯೋಗ ಖಾತರಿ ಯೋಜನೆ ಪರಿಶೀಲನೆ ನಡೆಸಿದ ಸಚಿವರು, ತಮ್ಮೆಲ್ಲ ಜನಸಂಪರ್ಕ ಸಭೆಗಳಲ್ಲಿ ಈ ಬಗ್ಗೆ ಖುದ್ದು ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಬೇಡಿಕೆಗಳಿಗೆ ಸ್ಪಂದಿಸಿ ಎಂದರು.
ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯಿದ್ದು ಬಿಸಿ ಅಡುಗೆ ಸಮಸ್ಯೆ ಬಗ್ಗೆ ಸಚಿವರು ಪ್ರಶ್ನಿಸಿದರು. ಶಾಲೆಗಳಲ್ಲಿ ನೀರಿಲ್ಲದ ಕಡೆ ಪಂಚಾಯಿತಿಯಿಂದ ನೀರು ಪಡೆಯಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಉತ್ತರಿಸಿದರು. ಶಾಲೆಗೆ ಬಂದ ಮಕ್ಕಳಿಗೆ ಬಿಸಿಯೂಟ ನೀಡಲು ನೀರು ನೀಡಲು ಕ್ರಮಕೈಗೊಳ್ಳಿ ಎಂದು ಸಚಿವರು ನಿರ್ದೇಶನ ನೀಡಿದರಲ್ಲದೆ, ಡಿಡಿಪಿಐ ಮಾನಿಟರ್ ಮಾಡಿ ಶಾಲೆಗಳ ನೀರಿನ ಪರಿಸ್ಥಿತಿ ಎಂದರು. ಜಿಲ್ಲಾಡಳಿತ ಶಾಲೆಗಳಿಗೆ ಬೆಂಬಲ ನೀಡಿ ಎಂದರು.
ಕ್ರೀಡಾ ಹಾಸ್ಟೆಲ್‍ಗಳು ಜೂನ್ ಮೂರರಿಂದ ಆರಂಭವಾಗಲಿದೆ. ಅಡುಗೆಯವರ ಸಮಸ್ಯೆ, ನೀರಿನ ಸಮಸ್ಯೆ, ಉಡುಪಿಯ ಕ್ರೀಡಾ ಹಾಸ್ಟೆಲ್ ಬೆಸ್ಟ್ ಇನ್ ದ ಸ್ಟೇಟ್ ಆಗಬೇಕೆಂದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,ಜಿಲ್ಲಾ ಪಂಚಾಯತ್ ಅನುದಾನವನ್ನು ಮಾರ್ಚ್‍ಗೆ ಖರ್ಚು ಮಾಡದೆ ಅಕ್ಟೋಬರ್ ವೇಳೆಗೆ ಶೇ. 50 ಖರ್ಚು ಮಾಡಿ. ಮಲೇರಿಯಾ ಕಡಿಮೆ ಆಗಿದೆ. ಡೆಂಗ್ಯು ಹನುಮಂತ ನಗರ, ಕೊಡಂಕೂರು ಮುಂತಾದೆಡೆ ವರದಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಪರಿಸ್ಥಿತಿ ಹೇಗಿದೆ ಎಂದ ಸಚಿವರು, ಎಸ್ ಸಿ ಎಸ್ ಟಿ ಎಲ್ಲ ಮಕ್ಕಳಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದರು. ಜಿಲ್ಲಾಧಿಕಾರಿಗಳು ರಾತ್ರಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಎಂದೂ ಹೇಳಿದರು.
ಎಸ್‍ಎಸ್ ಎಲ್ ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಕೊರಗ ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸಿಪಿಒ ಶ್ರೀನಿವಾಸ ರಾವ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಶಶಿಕಾಂತ್ ಪಡುಬಿದ್ರೆ, ನಾಮನಿರ್ದೇಶಿತ ಸದಸ್ಯರಾದ ಉಮೇಶ್ ಎ ನಾಯ್ಕ್, ರಾಜು ಪೂಜಾರಿ, ಇಗ್ನೇಶಿಯಸ್ ಡಿ ಸೋಜಾ, ದೇವಾನಂದ ಶೆಟ್ಟಿ ಸಭೆಯಲ್ಲಿ ಪಾಲ್ಗೊಂಡರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾನಾಗ್, ಎಸ್ ಪಿ ಕೆ ಟಿ ಬಾಲಕೃಷ್ಣ ಎಲ್ಲ ಇಲಾಖಾಧಿಕಾರಿಗಳಿದ್ದರು.