ನೀರಿನ ಕೃತಕ ಅಭಾವ ಸೃಷ್ಟಿಸಿರುವ ಆಡಳಿತದ ವಿರುದ್ಧ ಎಪ್ರಿಲ್ 13 ರಂದು ನಗರ ಪಾಲಿಕೆಗೆ ಮುತ್ತಿಗೆ
ಮಂಗಳೂರು : ಮಂಗಳೂರಿನ ನಾಗರಿಕರಿಗೆ ಕುಡಿಯುವ ನೀರು ಒದಗಿಸುವುದು ನಗರಾಡಳಿತದ ಬಹುಮುಖ್ಯ ಜವಾಬ್ದಾರಿ. ಆದರೆ ಇವತ್ತು ಪಾಲಿಕೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನಗರದಲ್ಲಿ ನೀರಿನ ಕೊರತೆಯನ್ನು ಸೃಷ್ಟಿಸಿ ನೀರು ಒದಗಿಸಲು ತಂದಿರುವ ರೇಶನಿಂಗ್ ಪದ್ಧತಿಯನ್ನು DYFI, CPIM ವಿರೋಧಿಸುತ್ತದೆ.
ತುಂಬೆ ವೆಂಟೆಡ್ ಡ್ಯಾಮ್‍ನಲ್ಲಿ ನೀರು ಶೇಖರಣೆ ಉತ್ತಮವಾಗಿದ್ದರೂ ಮಹಾನಗರ ಪಾಲಿಕೆ ಜನತೆಯಲ್ಲಿ ನೀರಿನ ಅಭಾವದ ಭೀತಿಯನ್ನು ಸೃಷ್ಟಿಸಿ ಜನರನ್ನು ಕುಡಿಯುವ ನೀರಿನಿಂದ ವಂಚಿಸಿ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ನಗರದ ಜನ ಆತಂಕ್ಕೀಡಾಗಿದ್ದಾರೆ. ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ತುಂಬೆಯ ವೆಂಟೆಡ್ ಡ್ಯಾಮ್‍ನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಮೊನ್ನೆ DYFI, CPIM ನಿಯೋಗ ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಹಳೆಯ ಅಣೆಕಟ್ಟು ತುಂಬಿ ತುಳುಕಿದ್ದು ಹೊಸ ಅಣೆಕಟ್ಟುವಿನಲ್ಲಿ 5 ಮೀ ಎತ್ತರಕ್ಕೆ ನೀರು ತುಂಬಿದೆ. ಈ ಹಿಂದಿನ ವರ್ಷಗಳಲ್ಲಿ ಹಳೆಯ ಡ್ಯಾಮ್‍ನಲ್ಲಿ ಮಾರ್ಚ್ ತಿಂಗಳಲ್ಲಿ ಎರಡುವರೆ ಮೀಟರ್ ಎತ್ತರಕ್ಕೆ ನೀರು ಇದ್ದ ಸಂದರ್ಭದಲ್ಲಿ ಜೂನ್ ಮೊದಲ ವಾರದವರೆಗೆ ನೀರಿನ ಅಭಾವ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ಹೊಸ ಡ್ಯಾಮ್ ಕಾರ್ಯಾರಂಭ ಮಾಡಿದ್ದರೂ 5 ಮೀಟರ್‍ವರೆಗೆ ನೀರಿದ್ದರೂ ಒಳಹರಿವು ನಿಂತಿರುವ ನೆಪವನ್ನು ಮುಂದಿಟ್ಟುಕೊಂಡು ಜನತೆಗೆ ಕುಡಿಯುವ ನೀರಿನಿಂದ ವಂಚಿಸುತ್ತಿರುವುದು ಮಹಾನಗರ ಪಾಲಿಕೆಯ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ.
ಮಹಾನಗರ ಪಾಲಿಕೆಯು 36 ಗಂಟೆಗೊಮ್ಮೆ ಮತ್ತೀಗ 4 ದಿನಗಳವರೆಗೆ ನೀರು ವಿತರಿಸಲಾಗುವುದೆಂದು ಸಾರ್ವಜನಿಕ ಪ್ರಕಟಣೆಯಲ್ಲಿ ಘೋಷಿಸಿದರೂ ನೀರು ಸರಬರಾಜಿನಲ್ಲಿ ಮಾತ್ರ ಈಗಲೂ ಬಹಳ ಸಮಸ್ಯೆ ಉಂಟಾಗುತ್ತಿದೆ. ಈ ರೀತಿ ಅನಾವಶ್ಯಕ ನೀರು ಸಂಗ್ರಹಿಸಿಡುವ ಅವಶ್ಯಕತೆ ಏನಿದೆ MRPL, SEZ ನಂತಹ ಕೈಗಾರಿಕೆಗಳಿಗೆ ನೀರು ವಿತರಣೆಯನ್ನು ಖಾತರಿಪಡಿಸಲು, ಖಾಸಗಿ ನೀರು ವಿತರಣಾ ಲಾಬಿಯ ಹಿತ ಕಾಪಾಡಲು ಜನಸಾಮಾನ್ಯರನ್ನು ಕುಡಿಯುವ ನೀರಿನಿಂದ ವಂಚಿಸುವ ಹುನ್ನಾರ ನಗರ ಪಾಲಿಕೆಯು ಈ ತೀರ್ಮಾನದ ಹಿಂದಿದೆ ಅನ್ನುವ ಅನುಮಾನಗಳು ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.
ಮಾತ್ರವಲ್ಲ ನಗರ ಪಾಲಿಕೆ ಪ್ರತೀ ವರ್ಷದ ಬಜೆಟಿನಲ್ಲಿ ಕೆರೆ ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಾಂತರ ರೂ ಹಣ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರೆ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂ ಸಂಗ್ರಹವಾಗುತ್ತಿದ್ದರೂ ನಗರದಲ್ಲಿ ಯಾವುದೇ ಕೆರೆಗಳ ಅಭಿವೃದ್ಧಿ ಇನ್ನೂ ಆಗಿಲ್ಲ. ಕೆಲವು ಕೆರೆಗಳಲ್ಲಿ ಸಾಕಷ್ಟು ನೀರಿದ್ದರೂ ಸರಿಯಾದ ಬಳಕೆಯಾಗುತ್ತಿಲ್ಲ. ಸರಕಾರಿ ಬಾವಿಗಳನ್ನು ಇನ್ನೂ ಕೂಡಾ ಪುನರ್ Pನವೀಕರಣಗೊಳಿಸಿಲ್ಲ.
ಆದ್ದರಿಂದ ಜಿಲ್ಲಾಡಳಿತ ಈ ಕುರಿತು ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ನಗರ ಪಾಲಿಕೆ ನೀರು ಸರಬರಾಜಿನ ಮೇಲೆ ಹೇರಿರುವ ನಿರ್ಬಂಧ ತೆಗೆದು ಹಾಕಿ ಶೇಖರಣೆಯಲ್ಲಿರುವ ನೀರನ್ನು ನಿಯಮಿತವಾಗಿ ಜನತೆಗೆ ವಿತರಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಲು ಆಗ್ರಹಿಸಿ ಹಾಗೂ ನೀರಿನ ಕೃತಕ ಅಭಾವ ಸೃಷ್ಟಿಸಿರುವ ಕಾಂಗ್ರೆಸ್ ಆಡಳಿತದ ವೈಫಲ್ಯದ ವಿರುದ್ಧ ತಾ. 13-04-2017 ರಂದು ಬೆಳಗ್ಗೆ 10 ಗಂಟೆಗೆ DYFI, CPIM ಮಂಗಳೂರು ನಗರ ದಕ್ಷಿಣ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.