ನೀರಿನ ಬಿಲ್ಲನ್ನು ಪಾವತಿಸಿ ಮಹಾನಗರಪಾಲಿಕೆಯ ಅಭಿವೃದ್ಧಿಗೆ ಸಹಕರಿಸಿ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಳಕೆದಾರರು ಉಪಯೋಗಿಸಲ್ಪಡುವ ಕುಡಿಯುವ ನೀರಿನ ದರಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲು ನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ದೈನಂದಿನ ನಿರ್ವಹಣಾ ವೆಚ್ಚಗಳು, ಸಿಬ್ಬಂಧಿ ವೇತನಗಳ ಪರಿಷ್ಕರಣೆ ಯಂತ್ರೋಪಕರಣಗಳ ಪುನಶ್ಚೇತನ ಇತ್ಯಾದಿ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಸಲುವಾಗಿ ಹಾಗೂ ಸರಕಾರದ ಸುತ್ತೋಲೆಯನ್ನು ಅನುಷ್ಟಾನಗೊಳಿಸುವ ಹಿನ್ನೆಲೆಯಲ್ಲಿ ಮಾನ್ಯ ಆಡಳಿತಾಧಿಕಾರಿಯವರ ನಡವಳಿ ಸಂಖ್ಯೆ:3/2019-20 ದಿನಾಂಕ: 15-06-2019 ರಂತೆ ನೀರಿನ ದರಗಳನ್ನು ಪರಿಷ್ಕರಿಸಿ ಎಪ್ರಿಲ್ 1 ರಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ.
ಅದರಂತೆ ಬಳಕೆದಾರರಿಗೆ ಮಾಹೆಯಾನ ಉಪಯೋಗಿಸಿದ ನೀರಿಗನುಗುಣವಾಗಿ ಪ್ರತಿ ತಿಂಗಳು ಬಿಲ್ ಜಾರಿಗೊಳಿಸುವುದು ನಗರಪಾಲಿಕೆ ಕರ್ತವ್ಯವಾಗಿದ್ದು ಸದ್ರಿ ನೀರಿನ ಬಿಲ್ ಜಾರಿಗೊಳಿಸಲು ಪಾಲಿಕೆಯ ಹೊರ ಗುತ್ತಿಗೆ ಸಿಬ್ಬಂದಿಗಳಾದ ಎಂ.ಪಿ.ಡಬ್ಲ್ಯು ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಸದ್ರಿ ಎಂ.ಪಿ.ಡಬ್ಲ್ಯು ಕಾರ್ಯಕರ್ತರು ಮಹಾನಗರಪಾಲಿಕಾ ವ್ಯಾಪ್ತಿಯಲ್ಲಿ ಮಳೆಗಾಲಕ್ಕೂ ಮುನ್ನಾ ಮಲೇರಿಯಾ, ಡೆಂಗ್ಯೂ ಮುಂತಾದ ರೋಗಗಳು ಉಲ್ವಣಗೊಂಡಿದ್ದು ಸಾರ್ವಜನಿಕರಿಗೆ ತುಂಬಾ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿರುವ ಕಾರಣ ಹೆಚ್ಚಿನ ನಿಗಾವಹಿಸಿ ಡೆಂಗ್ಯೂ ಹಾಗೂ ಮಲೇರಿಯ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ದಿನಂಪ್ರತಿ ಸಾರ್ವಜನಿಕರನ್ನು ಸಂಪರ್ಕಿಸಿ ಅಗತ್ಯ ಡೆಂಗ್ಯೂ ಮಲೇರಿಯಾ ನಿರ್ಮೂಲನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ ಕಾರಣ ಎಂ.ಪಿ.ಡಬ್ಲ್ಯು ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿಯೋಜಿಸಲ್ಪಟ್ಟಿದ್ದರಿಂದ ಕಳೆದ 3-4 ತಿಂಗಳಿನಿಂದ ಬಳಕೆದಾರರಿಗೆ ನೀರಿನ ಬಿಲ್ ವಿತರಣೆ ಮಾಡಲು ವಿಳಂಬವಾಗಿರುತ್ತದೆ. ಅದರಂತೆ ಪ್ರಸ್ತುತ ಡೆಂಗ್ಯೂ ಮತ್ತು ಮಲೇರಿಯಾ ದೂರುಗಳು ಕಡಿಮೆಯಾಗಿದ್ದು ಸದ್ರಿ ಎಂ.ಪಿ.ಡಬ್ಲ್ಯೂ ಕಾರ್ಯಕರ್ತರು ಅಕ್ಟೋಬರ್ 1 ರಿಂದ ನೀರಿನ ಬಿಲ್ ಜಾರಿಗೊಳಿಸಲಾಗಿದೆ. ಬಳಕೆದಾರರಿಗೆ ಕಳೆದ 3-4 ತಿಂಗಳಿನಿಂದ ಬಿಲ್ ಜಾರಿಯಾಗದೇ ಹಾಗೂ ಸರಕಾರದ ಆದೇಶದಂತೆ ಪರಿಷ್ಕøತ ದರಗಳನ್ನು ಅಳವಡಿಸಿಕೊಂಡು ಬಿಲ್ ಜಾರಿ ಮಾಡಲಾಗುತ್ತಿರುವ ಕಾರಣ ಬಳಕೆದಾರರಿಗೆ ಒಂದೇ ಬಾರಿ ಅತೀ ಹೆಚ್ಚು ಬಿಲ್ ಬಂದಿರುತ್ತದೆ. ಆದುದರಿಂದ ಬಳಕೆದಾರರು ತಾವು ಉಪಯೋಗಿಸಿದ ಪ್ರಮಾಣಕ್ಕನುಗುಣವಾಗಿ ಬಿಲ್ಲನ್ನು ಜಾರಿಮಾಡಲಾಗುತ್ತಿದ್ದು ಇದರಲ್ಲಿ ಯಾವುದೇ ವ್ಯತಿರಿಕ್ತ ಲೋಪದೋಷಗಳು ಇರುವುದಿಲ್ಲ. ಕೆಲವು ಸಂಘಟನೆಗಳು ಬಳಕೆದಾರರಿಗೆ ತಪ್ಪು ಮಾಹಿತಿ ನೀಡಿ ಬಿಲ್ಲು ಪಾವತಿಸುವುದು ಬೇಡವೆಂದು ತಿಳಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಆದರೆ ಬಳಕೆದಾರರು ಉಪಯೋಗಿಸಿದ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನೀರಿನ ಬಿಲ್ಲನ್ನು ವಿತರಣೆ ಮಾಡಲಾಗುತ್ತಿದ್ದು ನಿಗದಿತ ಕಾಲಾವಧಿಯೊಳಗೆ ಬಳಕೆದಾರರು ತಾವು ಉಪಯೋಗಿಸಿದ ನೀರಿನ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಸಂಘಟನೆಗಳ ಮಾಹಿತಿಯಂತೆ ಬಳಕೆದಾರರು ನೀರಿನ ಶುಲ್ಕವನ್ನು ಪಾವತಿಸದೇ ಇದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಕಾನೂನುಕ್ರಮ ವಹಿಸಲಾಗುವುದು. ಆದುದರಿಂದ ಸಕಾಲದಲ್ಲಿ ನೀರಿನ ಬಿಲ್ಲನ್ನು ಪಾವತಿಸಿ ಮಹಾನಗರಪಾಲಿಕೆಯ ಅಭಿವೃದ್ಧಿಗೆ ಸಹಕರಿಸಲು ಕೋರಲಾಗಿದೆ. ತಮ್ಮ ಮಾಪಕ ಗಣಾಂಕದಲ್ಲಿ ವ್ಯತ್ಯಯಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು (ನೀರು ಸರಬರಾಜು ವಿಭಾಗ) ಇವರನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಅಹವಾಲನ್ನು ಸಲ್ಲಿಸಬೇಕು ಎಂದು ಆಯುಕ್ತರು ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.