ನೀರಿನ ರೇಶನಿಂಗ್ ತಕ್ಷಣ ನಿಲ್ಲಿಸಿ ಇವತ್ತಿನಿಂದಲೇ ದಿನನಿತ್ಯ ನೀರು ಪೂರೈಕೆ ಮಾಡಬೇಕು- ಶಾಸಕ ಕಾಮತ್
ಮಂಗಳೂರು ನಗರಕ್ಕೆ ರೇಶನಿಂಗ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಿ ಜನರ ಹಿತದೃಷ್ಟಿಯಿಂದ ಇವತ್ತಿನಿಂದಲೇ ದಿನನಿತ್ಯ ನೀರು ಪೂರೈಸುವುದಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ತುಂಬೆಯ ಹೊಸ ಅಣೆಕಟ್ಟಿನಲ್ಲಿ ಏಳು ಮೀಟರ್ ತನಕ ನೀರು ನಿಲ್ಲಿಸುವ ವ್ಯವಸ್ಥೆ ಇದೆ. ಈ ಮೂಲಕ ವರ್ಷದ ಎಲ್ಲಾ ದಿನಗಳಲ್ಲಿಯೂ ಮಂಗಳೂರಿನ ಜನರಿಗೆ ಮಾತ್ರವಲ್ಲ, ಪಕ್ಕದ ಉಳ್ಳಾಲ, ಮೂಲ್ಕಿಯ ನಾಗರಿಕರಿಗೂ ನೀರು ಪೂರೈಕೆ ನಡೆಸಲಾಗುವಂತಹ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಹೊಸ ಅಣೆಕಟ್ಟಿನಲ್ಲಿ 6 ಮೀಟರ್ ತನಕ ನೀರು ನಿಲ್ಲಿಸಲಾಗುತ್ತಿದೆ. ಈಗ ಸದ್ಯ ಸುಮಾರು 17 ಅಡಿಗಳಿಗಿಂತಲೂ ಹೆಚ್ಚು ನೀರಿನ ಸಂಗ್ರಹ ಇದೆ. ಹೀಗಿರುವಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೀರನ್ನು ರೇಶನಿಂಗ್ ಮೂಲಕ ಕೊಡುವ ಕ್ರಮವನ್ನು ಕೈಗೊಂಡ ಅಧಿಕಾರಿ ಯಾರು ಎಂದು ಶಾಸಕ ಕಾಮತ್ ಪ್ರಶ್ನಿಸಿದರು.
ಯಾವುದೇ ಅಂಕಿಅಂಶಗಳು ಇಲ್ಲದೇ ಪಾಲಿಕೆ ಅಧಿಕಾರಿಗಳು ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಳ್ಳಬಾರದು. ಜಿಲ್ಲಾಧಿಕಾರಿಯವರಿಗೆ ತಪ್ಪು ಮಾಹಿತಿ ಕೊಡುವ ಮೂಲಕ ರೇಶನಿಂಗ್ ವ್ಯವಸ್ಥೆ ಶುರು ಮಾಡಲಾಗಿದೆ. ಆದರೆ ಪ್ರಸ್ತುತ ತುಂಬೆಯಲ್ಲಿ ಇರುವ ನೀರಿನ ಸಂಗ್ರಹ ಮೇ ಮುಗಿಯುವ ತನಕ ಸಾಕಾಗಲಿದೆ ಎಂದು ಶಾಸಕರು ತಿಳಿಸಿದರು.
ಬಿಜೆಪಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ನೀರಿನ ಸಂಗ್ರಹ ತುಂಬೆ ಅಣೆಕಟ್ಟಿನಲ್ಲಿ 13 ಅಡಿ ಮಾತ್ರ ಇದ್ದಾಗಲೂ ಜನರಿಗೆ ಯಾವುದೇ ತೊಂದರೆ ಆಗದೆ ನಾವು ಸಮರ್ಪಕ ವ್ಯವಸ್ಥೆ ಮಾಡಿದ್ದೇವು. ಆದರೆ ಈಗ ನೀರು ಸಾಕಷ್ಟು ಇರುವಾಗ 48 ಗಂಟೆ ಪಂಪಿಂಗ್ ನಿಲ್ಲಿಸುವ ನಿರ್ಧಾರ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಅಸಮರ್ಪಕ ನೀರಿನ ರೇಶನಿಂಗ್ ಮಾಡಿರುವ ಪಾಲಿಕೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಆಡಳಿತ ಮಾಡಿರುವುದು ಕಾಂಗ್ರೆಸ್ ಪಕ್ಷ.
ಮಹಾನಗರ ಪಾಲಿಕೆ ನಗರಾಭಿವೃಧ್ಧಿ ಇಲಾಖೆಯ ಅಡಿಯಲ್ಲಿ ಬರುತ್ತದೆ. ನಗರಾಭಿವೃಧ್ಧಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯುಟಿ ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಕಾಂಗ್ರೆಸ್ ನ ಐದೂ ಜನ ಮಾಜಿ ಮೇಯರ್ ಗಳು, ಕಾಂಗ್ರೆಸ್ ಕಾರ್ಪೋರೇಟರ್ ಗಳು, ಕಾಂಗ್ರೆಸ್ ನಾಯಕರು ಈಗ ಜನರ ಹಿತದೃಷ್ಟಿಯಿಂದ ಏನೂ ಕೆಲಸ ಮಾಡದೇ ಮೌನವಾಗಿರುವುದು ಯಾಕೆ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.
ಜನರು ಕಾಂಗ್ರೆಸ್ ನ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳನ್ನು ನೀರಿನ ಅಸಮರ್ಪಕ ಪೂರೈಕೆ ಬಗ್ಗೆ ಪ್ರಶ್ನೆ ಎತ್ತಿದಾಗ ಅವರು ಚುನಾವಣಾ ನೀತಿಸಂಹಿತೆ ಮತ್ತು ನಾವು ಈಗ ಜನಪ್ರತಿನಿಧಿಗಳಾಗಿಲ್ಲ, ಹಾಗಾಗಿ ನಾವು ಏನೂ ಮಾಡಲಾಗುವುದಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿರುವುದು ಖಂಡಿತ ತಪ್ಪು ಎಂದು ಶಾಸಕ ಕಾಮತ್ ಹೇಳಿದ್ದಾರೆ. ಕಾಂಗ್ರೆಸ್ಸಿನ ಹಲವು ಜನಪ್ರತಿನಿಧಿಗಳು ಮಾಜಿ ಆಗಿದ್ದರೂ ಕಳೆದ ಐದು ವರ್ಷ ಅಧಿಕಾರ ಅನುಭವಿಸಿಕೊಂಡಿದ್ದು ಅವರಿಗೂ ಜವಾಬ್ದಾರಿ ಇದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಬೇಕಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ಕಳೆದ ವರ್ಷಪೂರ್ತಿ ಸುಮ್ಮನಿದ್ದ ಪಾಲಿಕೆ ಕಾಂಗ್ರೆಸ್ ಆಡಳಿತ ಮತ್ತು ಅಧಿಕಾರಿಗಳು ಈಗ ರೇಶನಿಂಗ್ ಎನ್ನುವ ಹೆಸರಿನಲ್ಲಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಮಂಗಳೂರಿಗೆ ಕುಡಿಯುವ ನೀರಿನ ವಿತರಣೆಯ ಜಾಲ ಸಮರ್ಪಕವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾವು ಈ ಹಿಂದೆ ಅಧಿಕಾರಿಗಳ ಸಭೆಯಲ್ಲಿ ಎಚ್ಚರಿಸಿದ್ದಾಗಿ ಶಾಸಕ ಕಾಮತ್ ತಿಳಿಸಿದರು.
ಅದೇ ರೀತಿಯಲ್ಲಿ ಇವತ್ತಿನಿಂದಲೇ ಜನರಿಗೆ ನೀರಿನ ಪೂರೈಕೆ ನಿತ್ಯ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ ಶಾಸಕ ಕಾಮತ್, ಆದರೆ ಜನರು ಕೂಡ ನೀರನ್ನು ಪೋಲು ಮಾಡದೇ ನಿಯಮಿತವಾಗಿ ಬಳಸುವಂತೆ ಮನವಿ ಮಾಡಿದ್ದಾರೆ. ಮಂಗಳೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಾವಾಗಲೀ, ಸಂಸದರಾಗಲಿ ಅಧಿಕಾರಿಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವಾದರೂ, ನೀರು ನಮ್ಮ ದಿನನಿತ್ಯದ ಮೂಲಭೂತ ಅಗತ್ಯವಾಗಿರುವುದರಿಂದ ಅದಕ್ಕೆ ತೊಂದರೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು ತಾವು ಬದ್ಧರಾಗಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದರು.