ನೀರು, ಗಾಳಿ ಬಗ್ಗೆ ಕಾಳಜಿ ವಹಿಸಿ – ರಾಜಶೇಖರ್ ಪುರಾಣಿಕ

Spread the love

ನೀರು, ಗಾಳಿ ಬಗ್ಗೆ ಕಾಳಜಿ ವಹಿಸಿ – ರಾಜಶೇಖರ್ ಪುರಾಣಿಕ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರ ಪ್ರಾಯೋಜಿತ ‘ಇಕೋ ಕ್ಲಬ್ ತರಬೇತಿ ಕಾರ್ಯಕ್ರಮ’ ವನ್ನು

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದ. ಕ. ಹಾಗೂ ಉಡುಪಿ ಜಿಲ್ಲೆಯ ಅಧ್ಯಾಪಕರಿಗೆ ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಮಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಶ್ರೀ ರಾಜಶೇಖರ್ ಪುರಾಣಿಕ ಇವರು ಮಾತನಾಡುತ್ತಾ ಮಾನವನಿಗೆ ನೀರು, ಗಾಳಿ ಅತ್ಯಮೂಲ್ಯವಾಗಿದ್ದು ಇದನ್ನು ಅತ್ಯಂತ ಜಾಗರೂಕತೆಯಿಂದ ಬಳಸಿಕೊಂಡು ಇವುಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕೆಂದು ಕರೆಯಿತ್ತರು. ಇವುಗಳನ್ನು ಸಂರಕ್ಷಿಸಲು ಮರಗಿಡಗಳನ್ನು ನೆಡುವುದು, ಪರಿಸರದ ಬಗ್ಗೆ ಅರಿವು ಮೂಡಿಸುವುದು, ಶಾಲೆಗಳಲ್ಲಿ ಇಕೋ ಕ್ಲಬ್ ಮುಖಾಂತರ ಕಾರ್ಯಕ್ರಮ ನಡೆಸಿ ಸಮಸ್ಯೆಗಳ ಗಂಭೀರತೆಯನ್ನು ಮನಗಾಣಿಸಬೇಕೆಂದು ಹೇಳಿದರು. ಇದಕ್ಕಾಗಿ ಪಿಲಿಕುಳದಲ್ಲಿ ಮುಂದಿನ ದಿನಗಳಲ್ಲಿ ಅರ್ಬನ್ ಇಕೋ ಪಾರ್ಕ್ ಸ್ಥಾಪನೆಯಾಗಲಿದೆ ಎಂದರು.

ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀ ನಾಗೇಂದ್ರ ಮಧ್ಯಸ್ಥ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ವಿ ಪ್ರಸನ್ನ, ಹಿರಿಯ ವೈಜ್ಞಾನಿಕ ಅಧಿಕಾರಿ ಶ್ರೀ ಜಯಪ್ರಕಾಶ ನಾಯಕ್ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ. ಕೆ. ವಿ ರಾವ್ ಉಪಸ್ಥಿತರಿದ್ದರು. ಶ್ರೀ ಅಶೋಕ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನಂತರ ನಡೆದ ಅಧಿವೇಶನದಲ್ಲಿ ಶ್ರೀ ಜಯಪ್ರಕಾಶ ನಾಯಕ್ ಇವರು ಪರಿಸರ ಸಂಬಂಧಿ ಕಾನೂನುಗಳು ಹಾಗೂ ಪರಿಸರ ಮಾಲಿನ್ಯ ಕುರಿತು ವಿವರಿಸಿದರು. ಎರಡನೇ ಅಧಿವೇಶನದಲ್ಲಿ ಶ್ರೀ ದಿನೇಶ್ ನಾಯಕ್ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ರಾಮಕೃಷ್ಣ ಮರಾಟಿ ಜೀವ ವೈವಿಧ್ಯತೆ ಬಗ್ಗೆ ತಿಳಿಸಿಕೊಟ್ಟರು.


Spread the love