ನುಡಿದಂತೆ ನಡೆದಿದ್ದೇನೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ: ಬಾವಾ
ಮಂಗಳೂರು: ಮಾರುಕಟ್ಟೆ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ೧೨೬ ಕೋಟಿ ರೂ. ಅನುದಾನ ಬಂದಿದ್ದರೆ ಅದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹಿಯುದ್ದೀನ್ ಬಾವಾ ಹೇಳಿದ್ದಾರೆ.
ಕಾವೂರಿನಲ್ಲಿ ನಡೆದ ಕಾಂಗ್ರೆಸ್ ಕಾರ‍್ಯಕರ್ತರ ಸಭೆಯ ಬಳಿಕ ಅವರು ಮಾತನಾಡುತ್ತಿದ್ದರು.
ಬೃಹತ್ ಮಾರುಕಟ್ಟೆಗೆ ನಿರ್ಮಾಣಕ್ಕೆ ಸಾಲ ಅಥವಾ ಸಹಭಾಗಿತ್ವದಲ್ಲಿ ಅನುದಾನ ಬಿಡುಗಡೆ ಮಾಡಿರಬಹುದು. ಆದರೆ ಇಲ್ಲಿ ೧೨೬ ಕೋಟಿ ರೂ. ಕೂಡಾ ಅನುದಾನವಾಗಿದೆ. ಪ್ರಥಮ ಹಂತದಲ್ಲಿ ೬೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಿಂದಾಗಿ ಮಾರುಕಟ್ಟೆ ಪೂರ್ಣಗೊಂಡ ಬಳಿಕ ತೆರಿಗೆ ಹಣವನ್ನು ಬಡ್ಡಿ ಅಥವಾ ಮೂಲದನ ಪಾವತಿಸಲು ಬಳಕೆ ಮಾಡಬೇಕಿಲ್ಲ. ಮಾರುಕಟ್ಟೆಯಿಂದ ಬಂದ ಆದಾಯವನ್ನು ಪಾಲಿಕೆಗ ಎಲ್ಲ ೬೦ ವಾರ್ಡ್‌ಗಳ ಅಭಿವೃದ್ಧಿಗೂ ಬಳಸಬಹುದು. ಸಾಲ ತೆಗೆದುಕೊಂಡು ಮಾರುಕಟ್ಟೆ ನಿರ್ಮಾಣ ಮಾಡಿದರೆ ಮಂಗಳೂರಿನ ಸಮಸ್ತ ಜನರ ತೆರಿಗೆ ಹಣವನ್ನು ಸಾಲ ಮರುಪಾವತಿಗೆ ತೆಗೆದಿಡಬೇಕಾಗುತ್ತದೆ. ಆದರೆ ಇಲ್ಲಿ ಸಾಲದ ಪ್ರಶ್ನೆ ಇಲ್ಲ ಎಂದರು.
ಇನ್ನೂ ಸುರತ್ಕಲ್‌ನಲ್ಲಿ ಆಟೋ ನಿಲ್ದಾಣವಾಗಲೀ, ಬಸ್ ನಿಲ್ದಾಣವಾಗಲೀ ಸರಿ ಇರಲಿಲ್ಲ. ಆದರೆ ಇದೀಗ ಎಲ್ಲವೂ ಪರಿವರ್ತನೆಯಾಗುತ್ತಿದೆ. ಅಭಿವೃದ್ಧಿಯಾಗುತ್ತಿದೆ. ಇದರಿಂದಾಗಿ ಹೆಮ್ಮೆ ಪಟ್ಟು ತಾನು ಜನರ ಬಳಿಗೆ ಮತದಾನ ಯಾಚಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಸುರತ್ಕಲ್‌ನಿಂದ ಎಂಆರ್‌ಪಿಎಲ್‌ಗೆ ಸಂಪರ್ಕಿಸುವ ರಸ್ತೆ ೫೮ ಕೋಟಿ ರೂ.ವೆಚ್ಚದಲ್ಲಿ ಆರು ಪಥ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಈಗಾಗಲೇ ಐದು ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ನಿಂದ ಚರ್ಚ್ ವರೆಗೆ ಪೂರ್ಣಗೊಂಡಿದೆ. ಮುಂದಿನ ಕಾಮಗಾರಿ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸುರತ್ಕಲ್‌ಗೆ ಆರ್‌ಟಿಓ ಕಚೇರಿ ಮಂಜೂರಾಗಿದೆ. ಎರಡು ತಿಂಗಳ ಹಿಂದೆಯೇ ಕಾರ‍್ಯಾರಂಭಿಸಬೇಕಿತ್ತು. ಕೆಲವೊಂದು ಸಮಸ್ಯೆಗಳಿಂದಾಗಿ ಕಾರ‍್ಯಾರಂಭಿಸಿಲ್ಲ. ಈಗಾಗಲೇ ಕೆಎ ೬೨ ಎಂಬ ಸಂಖ್ಯೆ ಮಂಜೂರಾಗಿದೆ. ಭೂಮಿ ನಿಗಧಿ ಪಡಿಸಲಾಗಿದೆ. ಚುನಾವಣೆಯ ಬಳಿಕ ಎರಡು ತಿಂಗಳಿನಲ್ಲಿ ಕಾರ‍್ಯಾರಂಭಿಸುವ ವಿಶ್ವಾಸ ಇದೆ ಎಂದರು.
ತಾನು ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ನುಡಿದಂತೆ ನಡೆದಿದ್ದೇನೆ ಎಂಬ ಹೆಮ್ಮೆ ಇದೆ.
ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ಕವಿತಾ ಸನಿಲ್ ಉಪಸ್ಥಿತರಿದ್ದರು.