ಜನವರಿ 30; ನೂರಾರು ಗಾಂಧಿಯರ ನಡಿಗೆ, ಸೌಹಾರ್ದತೆಯ ಕಡೆಗೆ
ಜನವರಿ 30 ಭಾರತೀಯರ ಪಾಲಿಗೆ ಅತ್ಯಂತ ನೋವಿನ ದಿನ. ದೇಶದ ಸ್ವಾತಂತ್ರ ಹೋರಾಟಕ್ಕೆ ನೇತೃತ್ವವನ್ನು ನೀಡಿದ, ಸೌಹಾರ್ದತೆಯ ಜಾತ್ಯಾತೀತ ಭಾರತಕ್ಕಾಗಿ ಹಂಬಲಿಸಿದ, ಭಾರತವನ್ನು ಅಪಾರವಾಗಿ ಪ್ರೀತಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಮತಾಂಧ ಚಿಂತನೆಯಿಂದ ಕುರುಡಾದ ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದಿದ್ದು ಇದೇ ದಿನ. ಅಂದು ದೇಶವನ್ನು ಧರ್ಮಾದರಿತ ದೇಶವನ್ನಾಗಿಸಬೇಕು. ಏಕಸಂಸ್ಕøತಿ ಅಂಗೀಕರಿಸಬೇಕು ಎಂದು ಪ್ರಯತ್ನಿಸಿ ವಿಫಲವಾದ ಗಾಂಧೀಜಿಯ ಕೊಲೆಯ ಕಾರಣಕ್ಕೆ ದೇಶದ ಮುಖ್ಯವಾಹಿನಿಂದ ದೂರ ತಳ್ಳಲ್ಪಟ್ಟು ಅದೇ ಶಕ್ತಿಗಳು ಇಂದು ಮತ್ತೆ ಗರಿಗೆದರಿ ಮೇಲೆದ್ದಿವೆ. ಸುಳ್ಳು, ದ್ವೇಷ, ಹಿಂಸೆಯ ಮೂಲಕ ಮೇಲುಗೈ ಸಾಧಿಸಲು ನೋಡುತ್ತಿವೆ. ಅದರ ಪರಿಣಾಮವಾಗಿ ದೇಶದ ಎಲ್ಲಾ ಕಡೆ ಅಸಹನೆ, ಅಪನಂಬಿಕೆಗಳು ಹರಡುತ್ತಿದೆ. ಇದು ಆಂತರಿಕವಾಗಿ ದೇಶವನ್ನು ದುರ್ಬಲಗೊಳಿಸುತ್ತಿದೆ. ಧರ್ಮಾಧಾರಿತ ರಾಜಕಾರಣ ದೇಶದ ವರ್ತಮಾನ, ಭವಿಷ್ಯ ಎರಡನ್ನೂ ಅಪಾಯಕ್ಕೊಡ್ಡುತ್ತಿದೆ.
ಈ ಹಿನ್ನಲೆಯಲ್ಲಿ ದೇಶದ ಭವಿಷ್ಯಕ್ಕೆ ಮಾರಕವಾದ ಶಕ್ತಿಗಳ ಬಗ್ಗೆ ದೇಶಪ್ರೇಮಿಗಳೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಅಂದು ಗಾಂಧಿಯನ್ನು ಕೊಂದ ಮತಾಂಧ ಶಕ್ತಿಗಳಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದು ಸಾರಿಹೇಳಬೇಕಿದೆ. ಗಾಂಧೀಜಿ ಬಯಸಿದ ಸೌಹಾರ್ದತೆಯ ಶಾಂತಿಯ, ಬಹುಧರ್ಮೀಯರ ಜಾತ್ಯಾತೀತ ಭಾರತವನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ಗಟ್ಟಿ ಸ್ವರದಲ್ಲಿ ಘೋಷಿಸಬೇಕಾಗಿದೆ.
ಈ ಹಿನ್ನಲೆಯಲ್ಲಿ ಈ ಬಾರಿಯ ಗಾಂಧಿ ಹುತಾತ್ಮ ದಿನದಂದು ವಿಛಿದ್ರಕಾರಿ ಶಕ್ತಿಗಳಿಗೆ ಎದುರಾಗಿ ದೇಶದ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆಯೊಂದಿಗೆ ನೂರಾರು ಗಾಂಧಿಯರ ನಡಿಗೆ ಸೌಹಾರ್ದತೆಯ ಕಡೆಗೆ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಮೆರವಣಿಗೆಗಳ ಮೂಲಕ ಆಚರಿಸಲು ಸಮಾನ ಮನಸ್ಕ ದೇಶಪ್ರೇಮಿ ಯುವಜನರ ತಂಡವಾದ ಟೀಮ್ ಇಂಡಿಯಾ ನಿರ್ಧರಿಸಿದೆ. ಅಂದು ಸಂಜೆ 4 ಗಂಟೆಗೆ ಮಂಗಳೂರಿನ ಪುರಭವನದ ಬಳಿಯ ಗಾಂಧಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಗಾಂಧಿ ಮುಖವಾಡ ಧರಿಸಿ ನೂರಾರು ಗಾಂಧಿಯರ ನಡಿಗೆ ಸೌಹಾರ್ದತೆಯ ಕಡೆಗೆ ಕಾರ್ಯಕ್ರಮವು ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿರುವುದು ಎಂದು ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.