ನೆರೆಗೆ ಮುಳುಗಿದ ಉಡುಪಿ – ರಕ್ಷಣಾ ಕಾರ್ಯಕ್ಕೆ ಎನ್ ಡಿ ಆರ್ ಎಫ್ ಪಡೆ
ಉಡುಪಿ: ಜಿಲ್ಲೆಯಲ್ಲಿ ಉಂಟಾದ ಧೀಡಿರ್ ಮಳೆಗೆ ಉಂಟಾದ ನೆರೆಗೆ ಸಿಲುಕಿದ್ದ ಸುಮಾರು 50 ಕ್ಕೂ ಅಧಿಕ ಕುಟುಂಬಗಳನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿಯಾಗಿ ಸೇರಿ ದೋಣಿಗಳ ಮೂಲಕ ರಕ್ಷಣೆ ಮಾಡಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ತಿಳಿಸಿದ್ದಾರೆ.
ಕೃತಕ ನೆರೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳ ಸಂಚಾರ ಬಂದ್ ಆಗಿದೆ. ಅಂಬಲಪಾಡಿ, ಮಠದ ಬೆಟ್ಟು, ಗುಂಡಿಬೈಲು, ಬನ್ನಂಜೆ,ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ ತೀವ್ರವಾಗಿದ್ದು ನೆರೆ ನೀರು ಹಲವು ಮನೆಗಳಿಗೆ ನುಗ್ಗಿದ್ದು ಜನರು ಆತಂಕಕ್ಕೀಡಾಗಿದ್ದಾರೆ.
ಉಡುಪಿ ನಗರ ಠಾಣಾಧಿಕಾರಿ ಸಕ್ತೀವೇಲು ಮತ್ತು ಅವರ ತಂಡ, ಅಗ್ನಿಶಾಮಕ ದಳ ತಡರಾತ್ರಿಯಿಂದ ಕಾರ್ಯಚರಣೆಯಲ್ಲಿ ತೊಡಗಿದ್ದು, ಉಡುಪಿಗೆ ಎನ್ ಡಿ ಆರ್ ಎಫ್ ಪಡೆಯನ್ನು ಕರೆಸಿಕೊಳ್ಳಲಾಗುತ್ತಿದೆ. ನೆರೆ ಸಂಕಷ್ಟದಲ್ಲಿ ಸಿಲುಕಿದ್ದರೆ ರಕ್ಷಣೆಗೆ ಸಾರ್ವಜನಿಕರು ತುರ್ತು 1077 ಕಂಟ್ರೋಲ್ ರೂಂ ಗೆ ಸಂಪರ್ಕಿಸಲು ಡಿಸಿ ಕೋರಿದ್ದಾರೆ.
ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಮಳೆಯಿಂದ ಉಂಟಾದ ಪ್ರವಾಹಕ್ಕೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ,ಹೆರ್ಮುಂಡೆ ಪರಿಸರದ ಹಲವು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ರಾಜ್ಯ ಹೆದ್ದಾರಿ 1 ರಲ್ಲಿ ಕಾರ್ಕಳ ಅಜೆಕಾರು ರಸ್ತೆ ಸಂಪರ್ಕ ಕಡಿತವಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು. ಅಜೆಕಾರು ಠಾಣಾಧಿಕಾರಿ ಸುದರ್ಶನ್ ಹಾಗೂ ಅವರ ತಂಡ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.