ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ಸೂಲಿಬೇಲೆಯಂತವರು ದೇಶದ್ರೋಹಿಗಳು -ಸದಾನಂದ ಗೌಡ
ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಕೇಂದ್ರ ಸರಕಾರದ ಪರಿಹಾರ ತರಲು ವಿಫಲರಾದ ಸಂಸದರ ಹಾಗೂ ಕೇಂದ್ರ ಸಚಿವರನ್ನು ಪ್ರಶ್ನಿಸಿದ, ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ ದೇಶದ್ರೋಹಿ ಎಂಬ ಹಣೆಪಟ್ಟಿಕಟ್ಟಿದ್ದಾರೆ.
ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮತ್ತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನಡುವೆ ನಡೆಯುತ್ತಿದ್ದ ಟ್ಟಿಟ್ಟರ್ ಸಮರ ನಡೆಯುತ್ತಿತ್ತು.
ಕರ್ನಾಟಕದ ಸಂಸದರು ತಮಿಳುನಾಡು ಸಂಸದರನ್ನು ನೋಡಿ ಕಲಿಬೇಕು ಎಂದು ಕಿಡಿಕಾರಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಸಚಿವ ಸದಾನಂದ ಗೌಡ ಅವರು ಟ್ವಿಟ್ಟರ್ ಮೂಲಕ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಇಲ್ಲ ಸಲ್ಲದ ಕಥೆ ಹೇಳಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ನಮಗೆ ಕನಿಕರವಿದೆ ಎಂಬುದಾಗಿ ಚಕ್ರವರ್ತಿ ಸೂಲಿಬೆಲೆಯವರನ್ನು ಉದ್ದೇಶಿಸಿ ಸದಾನಂದ ಗೌಡ ಮಂಗಳವಾರ ಟ್ಟೀಟ್ ಮಾಡಿದ್ದರು.
ಇದನ್ನು ರೀ ಟ್ಟೀಟ್ ಮಾಡಿದ್ದ ಸೂಲಿಬೆಲೆ, “ಸದಾನಂದ ಗೌಡರೇ ಉತ್ತರ ಕರ್ನಾಟಕದ ಜನರನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೆ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ?” ಎಂಬುದಾಗಿ ಚಾಟಿ ಬೀಸಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡ, “ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ,” ಎಂಬುದಾಗಿ ಸದಾನಂದ ಗೌಡರು ಪ್ರತಿಕ್ರಿಯೆ ನೀಡಿದ್ದರು;