Home Mangalorean News Kannada News ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

Spread the love

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮಂಗಳೂರು: ಮಹಾಮಳೆಯಿಂದ ಭೀಕರ ಪ್ರವಾಹಕ್ಕೆ ತುತ್ತಾಗಿ ಸೂರು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಸಂತ್ರಸ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಕೋಟಿ ರೂ. ನೆರವನ್ನು ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು ಘೋಷಣೆ ಮಾಡಿದ್ದಾರೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕರ್ನಾಟಕ ಸೇರಿ ಮಹಾರಾಷ್ಟ್ರ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳು ಈ ಬಾರಿಯ ವರುಣನ ಆಕ್ರೋಶದಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಇದುವರೆಗೂ ಪ್ರವಾಹವನ್ನೇ ಕಂಡರಿಯದ ಕೆಲ ತಾಲೂಕುಗಳಲ್ಲಿಯೂ ಪ್ರವಾಹ ಉಂಟಾಗಿ ಸಾಕಷ್ಟು ಹಾನಿಯಾಗಿದೆ. ಕಳೆದ ಒಂದು ವಾರದಿಂದ ನಮ್ಮ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಸಮಸ್ಯೆಯ ಗಾತ್ರವನ್ನು ತಿಳಿದುಕೊಂಡಾಗಲೆಲ್ಲಾ ನಮಗೆ ದುಃಖವಾಗಿದೆ ಎಂದರು.

ಇದನ್ನೆಲ್ಲಾ ನೋಡಿ ಪರಿಹಾರ ಯೋಜನೆಯನ್ನು ಹಾಕಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾದ ಹಾನಿಯಾಗಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಕ್ಷೇತ್ರದಿಂದ ಏನು ಮಾಡಬಹುದು ಎಂದು ಯೋಚನೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅಗತ್ಯ ವಸ್ತುಗಳನ್ನು ಈಗಾಗಲೇ ಹಂಚಿದ್ದೇವೆ. ಇದುವರೆಗೂ ಮಾಡಿದ್ದು, ದೊಡ್ಡ ಸಮಸ್ಯೆಗೆ ಹನಿ ನೀರಿನ ಸಹಾಯವಾಗಿದೆ ಎಂದು ಹೇಳಿದರು.

ಇಂದು ನಾವು ಬಹಳ ದೊಡ್ಡ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಹೇಳಿ, ನಮ್ಮ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ನಿಧಿಗೆ 25 ಕೋಟಿ ರೂ. ಮೊತ್ತವನ್ನು ನೀಡುವುದಾಗಿ ತೀರ್ಮಾನಿಸಿದ್ದೇವೆ. ಇಡೀ ಕರ್ನಾಟಕದ ಯೋಜನೆಗಳು ಒಟ್ಟು ಸೇರಿದಾಗ ಶಕ್ತಿ ಹೆಚ್ಚಾಗುತ್ತದೆ ಎಂದು ನಮ್ಮದೊಂದು ಸೇವೆಯೊಂದನ್ನು ನೀಡಿದ್ದೇವೆ. ಕೇಂದ್ರ ಸರ್ಕಾರದಿಂದಲೂ ಹೆಚ್ಚು ಹಣ ಮಂಜೂರಾಗಬೇಕು ಎಂದು ಮತ್ತೊಮ್ಮೆ ನಾನು ಕೇಂದ್ರ ಸರ್ಕಾರವನ್ನು ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇನೆ ಎಂದರು.


Spread the love

Exit mobile version