ನೆಹರೂ ಯುವ ಕೇಂದ್ರ ವತಿಯಿಂದ ವಿದ್ಯಾರ್ಥಿಗಳ ಜೀವನ ಕೌಶಲ್ಯ ಶಿಕ್ಷಣ ಶಿಬಿರಕ್ಕೆ ಚಾಲನೆ
ಮಂಗಳೂರು: ಕೇಂದ್ರ ಸರಕಾರದ ನೆಹರೂ ಯುವ ಕೇಂದ್ರ ಸಂಘಟನೆ (ಎನ್ ವೈ ಕೆ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹದಿ ಹರೆಯದ ಮಕ್ಕಳ ಏಳು ದಿನಗಳ ಜೀವನ ಕೌಶಲ್ಯ ಶಿಕ್ಷಣ ಶಿಬಿರವು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನ.23ರಂದು ಶನಿವಾರ ಶುಭಾರಂಭಗೊಂಡಿದೆ.
ಕೇಂದ್ರ ಸರಕಾರವು 9ರಿಂದ 18ರ ಹರೆಯದ ಮಕ್ಕಳ ಗುಣಾತ್ಮಕ ವಿಕಸನಕ್ಕಾಗಿ ವಿಶೇಷವಾಗಿ ಆಯೋಜಿಸಿರುವ ಒಂದು ವಾರದ ಲೈಫ್ ಸ್ಕಿಲ್ ಶಿಬಿರಕ್ಕೆ ಕೆನರಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಮಾಲಿನಿ ಮತ್ತು ಶಿಬಿರಾರ್ಥಿಗಳು ಸೇರದಿ ದೀಪ ಪ್ರಜ್ವಲನೆ ಮಾಡುವ ಚಾಲನೆ ನೀಡಿದರು.
ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಕೌಶಲ್ಯ ಕೇಂದ್ರ ಮತ್ತು ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ (ಸಿಐಎಲ್) ಸಹಯೋಗದಲ್ಲಿ ಎನ್ ವೈ ಕೆ ಸಂಘಟನೆ ಈ ಒಂದು ವಾರದ ಶಿಬಿರ ಆಯೋಜಿಸಿದೆ.
ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಮುನ್ನವೇ ಅವರನ್ನು ಸರಿಯಾದ ದಿಕ್ಕಿನಲ್ಲಿ ಸಾಗುವ ಇಂತಹ ಜೀವನ ಕೌಶಲ್ಯ ತರಬೇತಿಗಳನ್ನು ನೀಡುವುದು ಅಗತ್ಯವಾಗಿದೆ. ಮಕ್ಕಳು ತಪ್ಪು ಹೆಜ್ಜೆ ಇಡುವ ಮೊದಲೇ ಅವರನ್ನು ತಿದ್ದುವಂತೆ ಆಗಬೇಕು ಎಂದು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಮಾಲಿನಿ ಹೇಳಿದರು.
ಶಾಲಾ ಕಾಲೇಜಿನ ತರಗತಿಯಲ್ಲಿ ಕಲಿಯುವುದರೊಂದಿಗೆ ಸಮಾಜದಲ್ಲಿ ಉತ್ತಮಂ ಜೀವನ ಮಾಡಲು, ವೃತ್ತಿಯಲ್ಲಿ ಮುನ್ನಡೆಯಲು ಹಲವಾರು ಜೀವನ ಕೌಶಲ್ಯಗಳನ್ನು ಅರಿತುಕೊಳ್ಳಬೇಕಾಗುವುದು ಉತ್ತಮ. ಈ ನಿಟ್ಟಿನಲ್ಲಿ ನೆಹರೂ ಯುವ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ಅವರು ನುಡಿದರು.
ಸಮಾಜದಲ್ಲಿ ಎಲ್ಲರೊಂದಿಗೆ ಸೇರಿ ಜೀವಿಸಲು ಜೀವನ ಕೌಶಲ್ಯ ಹೊಂದಿರುವುದು ಇಂದಿನ ಆಧುನಿಕ ಯುಗದಲ್ಲಿ ಅತ್ಯಗತ್ಯವಾಗಿದೆ. ಇಂದಿನ ಯುವ ಪೀಳಿಗೆ ಹೆಚ್ಚಾಗಿ ಸ್ಮಾರ್ಟ್ ಫೋನಿನಂತಹ ಸಾಧನಗಳಿಗೆ ಬಹುಬೇಗನೆ ಹೊಂದಿಕೊಳ್ಳುತ್ತಾರೆ. ಆದರೆ, ತನ್ನ ಕುಟುಂಬದವರೊಂದಿಗೆ, ಸಹಪಾಠಿಗಳೊಂದಿಗೆ, ಇತರರೊಡನೆ ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಜೀವನದಲ್ಲಿ ಸಾಧನೆ ಮಾಡಲು ಪಠ್ಯೇತರ ಕೌಶಲ್ಯಗಳು ಬೇಕಾಗುತ್ತದೆ ಎಂದು ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಮಾರ್ಟಿಸ್ ಹೇಳಿದರು.
ಇಂತಹ ಶಿಬಿರಗಳನ್ನು ಹದಿಹರೆಯ ಮಕ್ಕಳನ್ನು ಭವ್ಯ ಭಾರತದ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಆಯೋಜಿಸಲಾಗುತ್ತಿದೆ. ನೆಹರೂ ಯುವ ಕೇಂದ್ರ ಆಯೋಜಿಸುತ್ತಿರುವ ಇಂತಹ ಶಿಬಿರ ಉಚಿತವಾಗಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ನೆಹರೂ ಯುವ ಕೇಂದ್ರದ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರಪೇಟೆ ಮಾನವಿ ಮಾಡಿದರು.
ಸಿಐಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಸಚಿತಾ ನಂದಗೋಪಾಲ್, ನೆಹರೂ ಯುವ ಕೇಂದ್ರದ ಕೃಷ್ಣಮೂರ್ತಿ ರಾವ್, ಎನ್ ವೈ ಕೆ ಮಂಗಳೂರು ತಾಲೂಕು ಪ್ರತಿನಿಧಿಗಳಾದ ವಿಕಾಸ್ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು. ಸಿಐಎಲ್ ಸಂಚಾಲಕ ನಂದಗೋಪಾಲ್ ಕಾರ್ಯಕ್ರಮ ಸಂಯೋಜಿಸಿದರು.