ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ – ಸೂಕ್ತ ಕ್ರಮಕ್ಕೆ ರೂಪಾ ಬಂಗೇರಾ ಒತ್ತಾಯ
ಮಂಗಳೂರು: ಮಂಗಳೂರಿನ ಜನತೆಗೆ ಕುಡಿಯಲು ನೀರುಣಿಸುವ ನೇತ್ರಾವತಿಗೆ ಕೊಳಚೆ ಮಲಿನ ನೀರು, ಕೋಳಿ ಮಾಂಸತ್ಯಾಜ್ಯ ಸೇರುತ್ತಿರುವುದರ ಬಗ್ಗೆ ದಾಖಲೆಗಳ ಸಹಿತ ಮೇಯರ್‍ಗೆ ತಿಳಿಸಿದ್ದರು.ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಜನತೆಯ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಮನಾಪಾ ವಿಪಕ್ಷ ನಾಯಕಿ ರೂಪಾ ಡಿ ಬಂಗೇರಾ ಆರೋಪಿಸಿದ್ದಾರೆ.
ಕುಡಿಯುವ ನೀರಿನಲ್ಲಿ ಕೋಲಿ ಫಾರ್ಮ್ ಅಂಶವಿರುವುದನ್ನು ದಾಖಲೆಗಳ ಮೂಲಕ ಮಾಜಿ ಸಚಿವ ಶ್ರೀ ಕೃಷ್ಣ ಪಾಲೆಮಾರ್‍ರವರು ತಿಳಿಸಿದ್ದರೂ, ಪಾಲಿಕೆಯಿಂದ ನಡೆಸಿದ ನೀರಿನ ಪರೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದ್ದರೂ, ಈ ಬಗ್ಗೆ ಗೌಪ್ಯತೆಯನ್ನು ಕಾಪಾಡಿ ಇಡಿಯ ಪಾಲಿಕೆಯ ಕಾರ್ಯಾಂಗವನ್ನು ನಿಷ್ಕ್ರಿಯಗೊಳಿಸಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಮೇಯರ್‍ರವರು ಸರ್ವಾಧಿಕಾರದ ಆಡಳಿತವನ್ನು ನಡೆಸುತ್ತಿದ್ದಾರೆ.
ಮಾಜಿ ಸಚಿವ ಶ್ರೀ ಕೃಷ್ಣ ಜೆ.ಪಾಲೆಮಾರ್ ಮತ್ತು ಪಾಲಿಕೆ ವಿರೋಧ ಪಕ್ಷದ ನಾಯಕಿರೂಪ ಡಿ’ಬಂಗೇರ ನೇತೃತ್ವದ ನಿಯೋಗ ನೇತ್ರಾವತಿ ನದಿತೀರದ ಸ್ಥಳ ಪರಿಶೀಲನೆ ನಡೆಸಿ ವಾಸ್ತವ ಅಂಶವನ್ನು ಮನಗಂಡು ನೇತ್ರಾವತಿ ನದಿಗೆ ತ್ಯಾಜ್ಯ ನೀರು ಸೇರುವ ಸಚಿತ್ರ ವರದಿಗಳನ್ನು ಮಾಧ್ಯಮದ ಮೂಲಕ ಪ್ರಕಟಿಸಿದ್ದರೂ ಮೇಯರ್‍ರವರು ಜಾಣಕುರುಡುತನ ಪ್ರದರ್ಶಿಸಿ ಬೇಜವಬ್ದಾರಿ ಹೇಳಿಕೆ ನೀಡಿರುತ್ತಾರೆ.
ಇತ್ತೀಚೆಗೆ ಬಂಟ್ವಾಳ ಪುರಸಭೆಯ ಮಾಸಿಕ ಸಭೆಯಲ್ಲೂಅಲ್ಲಿನ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಪುರಸಭೆಯಲ್ಲಿ ಪ್ರಸ್ತಾಪಿಸಿ ಕೊಳಚೆ ತ್ಯಾಜ್ಯ ನದಿಗೆ ಸೇರುವ 18 ಜಾಗಗಳನ್ನು ಗುರುತಿಸಿ ತಿಳಿಸಿದ್ದು, ಕುಡಿಯಲು ಆಯೋಗ್ಯವಾದ ಮೇಲಿನ ನೀರಿನ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಅದೇ ನೀರು ಮಂಗಳೂರಿನ ಜನತೆಗೂ ಸರಬರಾಜು ಆಗುತ್ತಿದ್ದು ಇದೇ ಸ್ಥಿತಿ ಮುಂದುವರಿದಿದ್ದಲ್ಲಿ ಜನರಿಗೆ ತೀವ್ರತರಹದ ಆರೋಗ್ಯ ಸಮಸ್ಯೆಗಳು ಕಾಣಿಸುವ ಭೀತಿಯಿದೆ.ಆದ್ದರಿಂದ ಮಾನ್ಯ ಮೇಯ್‍ರವರು ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ಜನತೆಗೆ ಶುದ್ಧಕುಡಿಯುವ ನೀರನ್ನುಒದಗಿಸುವ ಬದ್ಧತೆಯನ್ನು ಈ ಮೂಲಕ ಅಗ್ರಹಿಸಿದ್ದಾರೆ. ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೊಗ್ಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಧೇಶನವನ್ನು ಪಾಲಿಕೆಗೆ ನೀಡಬೇಕಾಗಿ ಒತ್ತಾಯಿಸಿದ್ದಾರೆ.