ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಪರ್ಯಾಯ ರಸ್ತೆ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ನೇತ್ರಾವತಿ ಸೇತುವೆ ನದಿತೀರದಿಂದ ಕಣ್ಣೂರು ಮಸೀದಿ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಹೆದ್ದಾರಿ ನಿರ್ಮಾಣಕ್ಕೆ ಶಾಸಕ ಜೆ. ಆರ್.ಲೋಬೊ ಅವರು ಆಸಕ್ತಿ ವಹಿಸಿದರು.
ಚತುಷ್ಪಥ ರಸ್ತೆ ನಿರ್ಮಿಸುವ ಮುನ್ನ ಸರ್ವೇ ಕಾರ್ಯಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ನೀಡಿದ್ದು ಇದರ ಮೂಲಕ ಅಂದಾಜನ್ನು ಮಾಡುವಂತೆಯೂ ಹೇಳಿದ ಅವರು ಹೆದ್ದಾರಿ ಇಲಾಖೆ, ಲೋಕೋಪಯೋಗಿ ಇಲಾಖೆಗಳು, ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುತ್ತವೆ ಎಂದರು.
ಇಲ್ಲಿ 50 ಮೀಟರ್ ಅಗಲದ ನಾಲ್ಕು ಪಥ ಮಾಡಬೇಕಿದೆ. ಇದು ಆದಾಗ ಈ ರಸ್ತೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದಲ್ಲದೆ ಬಹುದಿನಗಳಿಂದ ನಿರೀಕ್ಷಿದ್ದ ಮಂಗಳೂರಿನ ಬೆಳವಣಿಗೆಯನ್ನು ಕಾಣಬಹುದು ಎಂದರು.
ಇಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಯಾವುದೇ ಮನೆಗಳನ್ನು ತೆರವು ಮಾಡುವುದಿಲ್ಲ. ಮನೆಗಳನ್ನು ತೆರಲು ಮಾಡದೆ ಯಾವ ರೀತಿಯಲ್ಲಿ ರಸ್ತೆ ನಿರ್ಮಿಸಲು ಸಾಧ್ಯವೆಂದು ಸರ್ವೇ ಮಾಡಬೇಕು. ಸಾಧ್ಯವಿದ್ದಷ್ಟು ನದಿಯಲ್ಲಿ ಸೇರಿಕೊಂಡಿರುವ ಭೂಮಿಯನ್ನೇ ಬಳಸಿಕೊಂಡು ರಸ್ತೆ ನಿರ್ಮಿಸಲು ಪ್ರಯತ್ನಿಸುವಂತೆಯೂ ಶಾಸಕ ಜೆ.ಆರ್.ಲೋಬೊ ಸೂಚಿಸಿದರು.
ಇಲ್ಲಿ ಬಹುಪಾಲು ಜನರ ಭೂಮಿಯನ್ನು ನದಿ ಒಳಗೊಂಡಿದೆ. ತೋರಿಕೆಗೆ ಈ ಭೂಮಿ ಈಗ ನದಿಯ ಮಡಿಲು ಸೇರಿದ್ದರೂ ಇದನ್ನು ಸಮಚಿತ್ತದಿಂದ ಸರ್ವೇ ಮಾಡಬೇಕಿದೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಅದರ ಪ್ರಯೋಜನ ಇಲ್ಲಿಯ ಜನರಿಗೆ ಸಿಗಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಇಲ್ಲಿ ರಸ್ತೆ ನಿರ್ಮಾಣವಾದರೆ ಜನರಿಗೆ ಸಂಪರ್ಕ ಸಾಧಿಸಲು ಮತ್ತು ಕೇರಳ- ಕರ್ನಾಟಕದ ಬೆಂಗಳೂರು ಹೆದ್ದಾರಿಯನ್ನು ಜೋಡಿಸಲು ನೆರವಾಗುತ್ತದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣಿಯನ್ನೂ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಇದು ಮಹತ್ವಾಕಾಂಕ್ಷಿ ಯೋಜನೆಯಾಗಲಿದ್ದು ಸಾರ್ವಜನಿಕರು ಸರ್ವೇ ಕೆಲಸಕ್ಕೆ ಅಧಿಕಾರಿಗಳಿಗೆ ಸಹಕರಿಸಬೇಕು.ಈ ಯೋಜನೆಯಿಂದ ಜನರಿಗೆ ಯಾವುದೇ ರೀತಿಯಲ್ಲು ತೊಂದರೆಯಾಗದು. ಪ್ರವಾಸೋಧ್ಯಮದ ಅಭಿವೃದ್ಧಿಯ ಜೊತೆಗೆ ಈ ಯೋಜನೆಯಿಂದ ಇನ್ನಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ ಎನ್ನುವುದು ಶಾಸಕ ಜೆ.ಆರ್.ಲೋಬೊ ಅವರ ವಿಶ್ವಾಸ.