ನೇರ ಫೋನ್-ಇನ್ – ಕರ್ಕಶ ಹಾರ್ನ್, ಬುಲೆಟ್ ಸೈಲೆನ್ಸರ್ ವಿರುದ್ದ ಕ್ರಮಕ್ಕೆ ಒತ್ತಾಯ
ಮಂಗಳೂರು: ಸಪ್ಟೆಂಬರ್ 23 ರಂದು ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಉಪ ಪೊಲೀಸ್ ಆಯುಕ್ತರು, (ಅಪರಾಧ ಮತ್ತು ಸಂಚಾರ), ಮಂಗಳೂರು ನಗರ ರವರು ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
ಈ ದಿನದ ಕಾರ್ಯಕ್ರಮದಲ್ಲಿ ಒಟ್ಟು 24 ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆ, ಸಲಹೆ, ಭಾತ್ಮಿ ಗಳಿಗೆ ಸ್ಪಂದಿಸಲಾಯಿತು. ಇವುಗಳಲ್ಲಿ ಹೆಚ್ಚಿನವು ಟ್ರಾಫಿಕ್ ಸಮಸ್ಯೆಗೆ ಸಂಬಂಧಪಟ್ಟದಾಗಿರುತ್ತದೆ. ಇದರಲ್ಲಿ ಎಕ್ಕೂರು ಅಯ್ಯಪ್ಪ ಭಜಾನಾ ಮಂದಿರದ ಬಳಿಯಲ್ಲಿ ರಿಕ್ಷಾ ಪಾರ್ಕಿಂಗ್ ಮಾಡುತ್ತಿದ್ದು, ಇದರಿಂದ ಪಾದಾಚಾರಿಗಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ, ಮಂಗಳಜ್ಯೋತಿಯಿಂದ ವಾಮಂಜೂರಿಗೆ ಹೋಗುವ ರಸ್ತೆಯಲ್ಲಿ ಬೈಕನ್ನು ಅಪಾಯಕಾರಿಯಾಗಿ ಚಾಲಯಿಸುವ ಬಗ್ಗೆ, ಸ್ಟೇಟ್ಬ್ಯಾಂಕ್ ನಿಂದ ಬಂಟ್ಸ್ ಹಾಸ್ಟೇಲ್ ವರೆಗೆ ಬಸ್ಸನ್ನು ಚಾಲಕರು ಪ್ರಯಾಣಿಕರನ್ನು ಹತ್ತಿಸಲು ನಿಧಾನಗತಿಯಲ್ಲಿ ಚಲಾಯಿಸುತ್ತಿರುವ ಕುರಿತು, ವಾಹನಗಳಲ್ಲಿ ಕರ್ಕಶ ಹಾರ್ನ್ ಬಳಸುವ ಬಗ್ಗೆ, ಬುಲೆಟ್ ಬೈಕಿನಲ್ಲಿ ಶಬ್ದಭರಿತ ಸೈಲೆಸ್ಸರ್ ಹಾಕಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುತ್ತಾರೆ.
ಕೊಟ್ಟಾರ ಚೌಕಿಯಿಂದ ಎ.ಜೆ ಆಸ್ಪತ್ರೆ ವರೆಗಿನ ಮತ್ತು ಹೊಸಬೆಟ್ಟು ಬಸ್ಸ್ಟಾಂಡ್ನಿಂದ ಸುರತ್ಕಲ್ವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಯಲ್ಲಿ ಲಾರಿ ಮತ್ತು ವಾಹನ ಪಾರ್ಕ್ ಮಾಡುತ್ತಿರುವ ಬಗ್ಗೆ, ಖಾಸಗಿ ವಾಹನದಲ್ಲಿ ಬಾಡಿಗೆ ರೂಪದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಬಗ್ಗೆ, ಕೊಣಾಜೆ ಪಂಚಾಯತುನ ಬಳಿ ಬಸ್ಸುಗಳ ಬಾರದೇ ಪರ್ಮಿಟ್ ಉಲ್ಲಂಘನೆ ಮಾಡುತ್ತಿರುವ ಬಗ್ಗೆ, ತೊಕ್ಕೊಟ್ಟು ಜಂಕ್ಷನ್ನಲ್ಲಿ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಚಾಲಯಿಸುವ ವಾಹನಗಳ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ, ಮಂಗಳದೇವಿಯಲ್ಲಿ ಸಿಟಿ ಬಸ್ಸುಗಳು ಎಲ್ಲಂದರಲ್ಲಿ ಪಾರ್ಕ್ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಕರೆಗಳನ್ನು ಮಾಡಿರುತ್ತಾರೆ.
ಅದಲ್ಲದೇ ಈಗಾಗಲೇ ದೂರು ದಾಖಲಿಸಿ ಪ್ರಕರಣಗಳ ಪ್ರಸ್ತುತ ಹಂತದ ಬಗ್ಗೆ, ನರೆಮನೆಯವರಿಂದ ಆಗುವ ತೊಂದರೆಯ ಬಗ್ಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿರುತ್ತಾರೆ. ಕರೆ ಮಾಡಿರುವ ಸಾರ್ವಜನಿಕರಿಗೆ ಕರೆಗಳಲ್ಲಿ ಕೆಲವೊಂದು ಸಮಸ್ಯೆಯನ್ನು ಆ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರಿಗೆ ಪೋನ್ ಮೂಲಕ ಸಮಸ್ಯೆಯನ್ನು ತಿಳಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಸೂಕ್ತ ಸೂಚನೆಯನ್ನು ನೀಡಲಾಯಿತು. ಕೆಲವು ಸಮಸ್ಯೆಗಳಿಗೆ ಕೂಡಲೇ ವಾಯರ್ಲೆಸ್ ಮೂಲಕ ಪಿ.ಸಿ.ಅರ್ಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆಗೆ ಪರಿಹಾರವನ್ನು ಮಾಡಲಾಯಿತು