ನೈತಿಕ ಪೋಲಿಸ್ ಗಿರಿಯನ್ನು ನಿಯಂತ್ರಿಸುವಲ್ಲಿ ರಾಜ್ಯಸರ್ಕಾರ ವಿಫಲ: ಆಮ್ ಆದ್ಮಿ ಪಾರ್ಟಿ

Spread the love

ನೈತಿಕ ಪೋಲಿಸ್ ಗಿರಿಯನ್ನು ನಿಯಂತ್ರಿಸುವಲ್ಲಿ ರಾಜ್ಯಸರ್ಕಾರ  ವಿಫಲ: ಆಮ್ ಆದ್ಮಿ ಪಾರ್ಟಿ  

 ಉಡುಪಿ: ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ನೈತಿಕ ಪೋಲಿಸ್ ಗಿರಿಯನ್ನು ನಿಯಂತ್ರಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಆಮ್ ಆದ್ಮಿ ಪಾರ್ಟಿ  ಹೇಳಿಕೆಯಲ್ಲಿ ಆರೋಪಿಸಿದೆ.

ಗೋಸಾಗಾಣಿಕೆ ಆರೋಪದಲ್ಲಿ ಸಂಘಪರಿವಾರದ ಕಾರ್ಯಕರ್ತರಿಂದ ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಹತ್ಯೆಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿದೆ. ಆಮ್ ಆದ್ಮಿ ಪಾರ್ಟಿ ಯ ಕರಾವಳಿ ವಲಯದ ಕಾರ್ಯಕರ್ತರು ಪ್ರವೀಣ್ ಕುಟುಂಬದವರನ್ನು ಭೇಟಿ ಮಾಡಿ, ಸಾಂತ್ವನ ಮತ್ತು ಬೆಂಬಲ ವ್ಯಕ್ತಪಡಿಸಿದರು.

aap-praveen-poojary-meet1 aap-praveen-poojary-meet aap-pressclub

ಈ ಬಗ್ಗೆ ಹೇಳಿಕೆ ನೀಡಿರುವ ಆಪ್ ನ ರಾಜ್ಯ ಸಹ ಸಂಚಾಲಕಿ ಶ್ರೀಮತಿ ಶಾಂತಲಾ ದಾಮ್ಲೆಯವರು, “ಕರಾವಳಿ ಭಾಗದಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾಗಿ ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವವರನ್ನು ಬಂಧಿಸಿ ಕಾನೂನು ಕ್ರಮಗೊಳ್ಳಲು ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಪ್ರವೀಣ್ ಪೂಜಾರಿಯವರ ಹತ್ಯೆ ನಡೆದಿದೆ. ಸಮಾಜಘಾತುಕ ಶಕ್ತಿಗಳನ್ನು ಸರ್ಕಾರವೇ ಪ್ರೋತ್ಸಾಹಿಸಿ ಬೆಳೆಸುತ್ತಿದ್ದು ಈ ಭಾಗದ ಜನರು ಭಯದ ವಾತಾವರಣದಲ್ಲಿ ದಿನ ದೂಡುತ್ತಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಲ್ಲೆ, ಕೊಲೆ ಈಗ ಇತರ ವರ್ಗದವರಿಗೆ ವಿಸ್ತರಣೆ ಆಗುತ್ತಿರುವುದು ಈ ಸಮಾಜ ಘಾತುಕ ಶಕ್ತಿಗಳ ಕರಾಳ ಹಸ್ತ ಎಲ್ಲಾ ಕಡೆ ವಿಸ್ತರಿಸುತ್ತಿದೆ ಎಂಬುದರ ಸೂಚನೆಯಾಗಿದೆ” ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು “ಗೋರಕ್ಷಕರ” ಬಗ್ಗೆ ಎಚ್ಚರಿಕೆ ಮತ್ತು ಕಠಿಣ ಕ್ರಮದ ಭರವಸೆ ನೀಡಿದ ಕೆಲವೇ ದಿನದಲ್ಲಿ ತನ್ನದೇ ಪಕ್ಷದ ಕಾರ್ಯಕರ್ತ ಹತ್ಯೆಯಾಗಿರುವುದು ಅವರ ಹೇಳಿಕೆಯ ಗಂಭೀರತೆ ಮತ್ತು ಪ್ರಭಾವದ ಬಗ್ಗೆ ಸಂಶಯ ಉಂಟುಮಾಡುತ್ತಿದೆ. ಗೋರಕ್ಷಣೆ ಹೆಸರಿನಲ್ಲಿ ಗುಂಡಾಗಿರಿಯನ್ನು ಬೆಂಬಲಿಸುವ ಕಾರ್ಯದಲ್ಲಿ ನಿರತರಾಗಿದ್ದ ಬಿಜೆಪಿ ಇಂದು ತಮ್ಮದೇ ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿದೆ. ಈ ಪ್ರಕರಣವನ್ನು ಅವಘಡ ಎಂದು ಬಿಂಬಿಸಲು ಪ್ರವೀಣ್ ಪೂಜಾರಿಯವರ ಕುಟುಂಬ ವರ್ಗದ ಮೇಲೆ ಬಾಹ್ಯ ಶಕ್ತಿಗಳು ಒತ್ತಡ ಹೇರುತ್ತಿರುವ ಬಗ್ಗೆ ವರಧಿಯಾಗಿದ್ದು ಇದು ಖಂಡನೀಯ. ಕುಟುಂಬ ಅಥವಾ ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತಿ ತನಿಖೆ ನಡೆಸಿ ಕೊಲೆಗಡುಕರು ಗರಿಷ್ಟ ಶಿಕ್ಷೆ ನೀಡಬೇಕು ಮತ್ತು ಮೃತ ಪ್ರವೀಣ್ ಪೂಜಾರಿಯವರ ಕುಟುಂಬಕ್ಕೆ ನ್ಯಾಯ ಒದಗಿಸಲು ಪರಿಶ್ರಮಿಸಬೇಕು ಎಂದು ಆಗ್ರಹಿಸಿದರು.

ಆಮ್ ಆದ್ಮಿ ಪಾರ್ಟಿಯು ಈ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಕರಾವಳಿ ಭಾಗದ ಜನ ಶಾಂತಿ ಮತ್ತು ಸಂಯಮ ಪಾಲಿಸಬೇಕೆಂದು, ಸಮಾಜ ಘಾತುಕ ಶಕ್ತಿಗಳನ್ನು ಹಾಗು ಓಟಿಗಾಗಿ ಜಾತಿಯ ನೆಪದಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ಪಕ್ಷಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಎಲ್ಲರೂ ಪಣತೊಟ್ಟು ಶಾಂತಿಯುತ, ಭಯಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.


Spread the love