ನೌಕಾ ಸೇನೆಯೇ ‘ಸುವರ್ಣ ತ್ರಿಭುಜ’ಕ್ಕೆ ಢಿಕ್ಕಿ ಹೊಡೆದು 7 ಮೀನುಗಾರರನ್ನು ಕೊಲೆ ಮಾಡಿದೆ- ಪ್ರಮೋದ್ ಮಧ್ವರಾಜ್ ಆರೋಪ

Spread the love

ನೌಕಾ ಸೇನೆಯೇ ‘ಸುವರ್ಣ ತ್ರಿಭುಜ’ಕ್ಕೆ ಢಿಕ್ಕಿ ಹೊಡೆದು 7 ಮೀನುಗಾರರನ್ನು ಕೊಲೆ ಮಾಡಿದೆ- ಪ್ರಮೋದ್ ಮಧ್ವರಾಜ್ ಆರೋಪ

ಉಡುಪಿ: ಭಾರತೀಯ ನೌಕಾಸೇನೆಯ ನೌಕೆಯೇ ಮಲ್ಪೆಯ ಮೀನುಗಾರಿಕಾ ದೋಣಿ ‘ಸುವರ್ಣ ತ್ರಿಭುಜ’ಕ್ಕೆ ಢಿಕ್ಕಿ ಹೊಡೆದು ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ಕೊಂದಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಒತ್ತಾಯಿಸಿದ್ದಾರೆ.

ಮೂಳೂರಿನ ಸಾಯಿರಾಧಾ ರೆಸಾರ್ಟ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿಗಾಗಿ ಆಗಮಿಸಿದ ಪ್ರಮೋದ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಒತ್ತಾಯ ಮಾಡಿದರು.

ಈ ಮೊದಲೂ ನಾನು ಇದನ್ನೇ ಹೇಳಿದ್ದೆ. ಈಗಲೂ ಹೇಳುತಿದ್ದೇನೆ. ಭಾರತೀಯ ನೌಕಾಸೇನೆಯ ನೌಕೆಯೇ ಮೀನುಗಾರಿಕೆ ದೋಣಿಗೆ ಢಿಕ್ಕಿ ಹೊಡೆದು ಮೀನುಗಾರರನ್ನು ಕೊಂದಿದೆ. ಈ ಕುರಿತು ನ್ಯಾಯಾಂಗ ತನಿಖೆಯೇ ಆಗಬೇಕು. ಈ ಮೂಲಕ ಸತ್ಯಾಂಶ ಹೊರಬೇಕಿದೆ ಎಂದವರು ಹೇಳಿದರು. ಬಿಜೆಪಿಯವರು ನಾಪತ್ತೆಯಾದ ಮೀನುಗಾರರ ಹೆಣದ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.

ನಾಲ್ಕೂವರೆ ತಿಂಗಳ ಹಿಂದೆ ಕಾಣೆಯಾದ ಮಲ್ಪೆ ಮೀನುಗಾರಿಕಾ ದೋಣಿ ಏಕಾಏಕಿ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆಯೇ ಐಎನ್ಎಸ್ ಕೊಚ್ಚಿನ್ ಎಂಬ ನೌಕಾಸೇನೆಯ ಶಿಪ್ ನಮ್ಮ ದೋಣಿಯನ್ನು ಹೊಡೆದುಹಾಕಿದೆ ಎಂದು ಮಾಡಿದ ಆರೋಪ ಇಂದು ಸತ್ಯವಾಗಿದೆ ಎಂದರು.

ಹೀಗಾಗಿ 7 ಮಂದಿ ಮೀನುಗಾರರನ್ನು ಕೊಂದ ಆರೋಪದ ಮೇಲೆ ನೌಕಾ ಸೇನೆ ಅವರನ್ನು ಅದಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು. ಮಾಜಿ ಮೀನುಗಾರಿಕಾ ಸಚಿವನಾಗಿ ಹಾಗೂ ಮೀನುಗಾರರ ಕುಟುಂಬದಿಂದ ಬಂದವನಾಗಿ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ ಎಂದರು.

ನೌಕಾಪಡೆಯ ಶಿಪ್ ಅದನ್ನು ಹೊಡೆದಿದ್ದರೆ, ಇಷ್ಟರವರೆಗೆ ಅದನ್ನು ಮುಚ್ಚಿಟ್ಟು ಹುಡುಕುವ ನಾಟಕ ಮಾಡುವ ಅಗತ್ಯವಿರಲಿಲ್ಲ. ಈಗ ಏಕಾಏಕಿ ಚುನಾವಣೆ ಮುಗಿದ ಬಳಿಕ ಬಹಿರಂಗ ಪಡಿಸಿರುವುದು, ಅದೂ ಕೂಡಾ ಒಬ್ಬ ಬಿಜೆಪಿ ಶಾಸಕ ಹೋಗಿ ಹುಡುಕಿದ ರೀತಿಯಲ್ಲಿ ಹೆಸರು ಕಮಾಯಿ ಮಾಡಲು ನಡೆಸಿದ ರಾಜಕೀಯ, ಅದರಲ್ಲೂ ಮೀನುಗಾರರ ಹೆಣಗಳ ಮೇಲೆ ಮಾಡಿದ ರಾಜಕೀಯ ನಾಟಕವನ್ನು ಖಂಡಿಸುತ್ತೇನೆ ಎಂದರು.

ಈಗ ನಾವು ಜಿ.ಶಂಕರ್, ಮೀನುಗಾರ ಬಂಧುಗಳ ಕುಟುಂಬದ ಸದಸ್ಯರು ಹಾಗೂ ಮೀನುಗಾರರ ನಾಯಕರೊಂದಿಗೆ ಈಗಾಗಲೇ ಸಿಎಂ ಬಳಿ ಮಾತುಕತೆ ನಡೆಸಿದ್ದೇವೆ. ಕನಿಷ್ಠ ಪಕ್ಷ 6 ಲಕ್ಷದವರೆಗೆ ಪರಿಹಾರ ನೀಡಲು ಸಾಧ್ಯವಿದೆ. ಇನ್ನು ಏಳು ಮಂದಿ ಮೀನುಗಾರರು ಬದುಕಿರುವ ಬಗ್ಗೆ ಯಾವುದೇ ಆಶಾಭಾವನೆ ಉಳಿದಿಲ್ಲ. ಹೀಗಾಗಿ ಪ್ರತಿ ಕುಟುಂಬದ ಸದಸ್ಯರಿಗೆ ಕನಿಷ್ಠ 10 ಲಕ್ಷ ರೂ. ಪರಿಹಾರ ಕೊಡುವಂತೆ ಆಗ್ರಹ ಮಾಡಿದ್ದೇವೆ.

ಮುಖ್ಯಮಂತ್ರಿಗಳು ಈಗಾಗಲೇ ಮೀನುಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಪರಿಹಾರ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಪ್ರಮೋದ್ ನುಡಿದರು.

ಆದರೆ ಇದು ನೌಕಾಪಡೆಯಿಂದ, ಕೇಂದ್ರ ಸರಕಾರದಿಂದ ಆದ ತಪ್ಪಿಗೆ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರನ್ನು ರಾಜಕೀಯ ಕಾರಣಗಳಿಗಾಗಿ ಹಿಯಾಳಿಸುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ, ಇವತ್ತು ಬಿಜೆಪಿಯವರು ನಗ್ನವಾಗಿದ್ದಾರೆ.

ಇದು ಮೀನುಗಾರರ ಕಗ್ಗೊಲೆ, ಕೇಂದ್ರ ಸರಕಾರ ಹಾಗೂ ನೌಕಾಪಡೆಯಿಂದ ನಡೆದಿದೆ. ಇದರ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು ಎಂದು ಪ್ರಮೋದ್ ಹೇಳಿದರು.


Spread the love