ನ್ಯಾಯಬೆಲೆ ಅಂಗಡಿಗಳಲ್ಲಿ – ಪಡಿತರ ಚೀಟಿದಾರರು ಇ-ಕೆವೈಸಿ ನೀಡಿ
ಮಂಗಳೂರು : ಸರ್ಕಾರದ ಸೂಚನೆಯಂತೆ ಎಲ್ಲಾ ಪಡಿತರ ಚೀಟಿದಾರರ ಕುಟುಂಬದ ಸದಸ್ಯರ ಇ-ಕೆವೈಸಿಯನ್ನು ಸಂಗ್ರಹಿಸಲು ಆದೇಶವಾಗಿದ್ದು ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ದಿನಾಂಕ 1 ರಿಂದ 10 ರವರೆಗೆ ಎಲ್ಲಾ ಪಡಿತರ ಚೀಟಿದಾರರು ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಎಲ್ಲಾ ಕುಟುಂಬದ ಸದಸ್ಯರ ಇ-ಕೆವೈಸಿಯನ್ನು ನೀಡಬೇಕು. ಇ-ಕೆವೈಸಿ ನೀಡಲು ಯಾವುದೇ ಶುಲ್ಕ ಇರುವುದಿಲ್ಲ. ಇದನ್ನು ಉಚಿತವಾಗಿ ಮಾಡಲು ಕ್ರಮವಹಿಸಲಾಗಿದ್ದು ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಸಹಕರಿಸಬೇಕಿದೆ.
ಈಗಾಗಲೇ ಈ ಹಿಂದೆ ಇ-ಕೆವೈಸಿ ನೀಡಿದ್ದಲ್ಲಿ ಮತ್ತೊಮ್ಮೆ ನೀಡುವ ಅವಶ್ಯಕತೆ ಇರುವುದಿಲ್ಲ. ಇ-ಕೆವೈಸಿ ಪಡೆಯಲು ಯಾರಾದರೂ ಹಣ ಕೇಳಿದಲ್ಲಿ ಅಥವಾ ಏನಾದರೂ ದೂರುಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಹಾಯಕ ನಿರ್ದೇಶಕರು, ಆಹಾರ ಇಲಾಖೆ ಮಂಗಳೂರು ಅಥವಾ ಆಯಾ ತಾಲೂಕಿನ ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ದ.ಕ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.