ನ್ಯಾಯಾಧೀಶರಸಮ್ಮುಖದಲ್ಲಿಯೇ ಸ್ಪೆಷಲ್ ಪ್ರಾಸಿಕ್ಯೂಟರ್ ಮೇಲೆ ಶೂ ಎಸೆದ ಅತ್ಯಾಚಾರದ ಆರೋಪಿ

Spread the love

ನ್ಯಾಯಾಧೀಶರ ಸಮ್ಮುಖದಲ್ಲಿಯೇ ಸ್ಪೆಷಲ್ ಪ್ರಾಸಿಕ್ಯೂಟರ್ ಮೇಲೆ ಶೂ ಎಸೆದ ಅತ್ಯಾಚಾರದ ಆರೋಪಿ

ಉಡುಪಿ: ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬ ನ್ಯಾಯಾಲಯದಲ್ಲಿ ನ್ಯಾಯಾಧೀಶ ಸಮ್ಮುಖದಲ್ಲಿಯೇ ವಕೀಲರ ಮೇಲೆ ಶೂ ಎಸೆದ ಆತಂಕಕಾರಿ ಘಟನೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಸಂಜೆ ನಡೆದಿದೆ. ಈ ಬಗ್ಗೆ ಶುಕ್ರವಾರ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೋಕ್ಸೋ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಪ್ರಶಾಂತ ಕುಲಾಲ್ ಎಂಬವನೇ ಶೂ ಎಸೆದ ಅಪರಾಧಿ. ಈತನಿಗೆ ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ ಎಂಬವರ ಮೇಲೆ ಈತ ಶೂ ಎಸೆದಿದ್ದಾನೆ.

ಬ್ರಹ್ಮಾವರ ಸಮೀಪದ ಹೇರೂರು ಗ್ರಾಮದ ನಿವಾಸಿ ಪ್ರಶಾಂತ್, 2013ರಲ್ಲಿ 15 ವರ್ಷ ವಯಸ್ಸಿನ ಶಾಲಾ ಬಾಲಕಿಯೊಬ್ಬಳನ್ನು ಪೆರ್ಡೂರು ಸಮೀಪದ ಪಾಡಿಗಾರ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಆಕೆಯ ದೂರಿನಂತೆ ಪ್ರಕರಣ ದಾಖಲಾಗಿ, ವಿಚಾರಣೆ ನಡೆದು, ಗುರುವಾರ ವಿಶೇಷ ಫೋಕ್ಸೋ ನ್ಯಾಯಾಲಯದಲ್ಲಿ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರು ಆತನಿಗೆ 20 ವರ್ಷಗಳ ಜೈಲು ಶಿಕ್ಷೆ, 25 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ಥೆ ಬಾಲಕಿಯ ಮನೆಯವರ ಪರವಾಗಿ ಸರ್ಕಾರ ವಿಜಯ ವಾಸು ಪೂಜಾರಿ ಅವರನ್ನು ವಿಶೇಷ ಅಭಿಯೋಜನಕರನ್ನಾಗಿ ನಿಯೋಜಿಸಿತ್ತು. ಅವರು ಗುರುವಾರ ತಮ್ಮ ಕೊನೆಯ ವಾದವನ್ನು ಮಂಡಿಸಿ, ಆರೋಪಿ ಪ್ರಶಾಂತ್ ಅತ್ಯಾಚಾರ ಮಾತ್ರವಲ್ಲದೇ ಕೊಲೆ ಮತ್ತು ಇತರ ಆನೇಕ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ. ಆದ್ದರಿಂದ ಆತನಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಆಗ್ರಹಿಸಿದ್ದರು.

ಇದರಿಂದ ಅವರ ಮೇಲೆ ಕುಪಿತನಾದ ಆರೋಪಿ, ನ್ಯಾಯಾಧೀಶರು ಆತನಿಗೆ ಗರಿಷ್ಠ ಶಿಕ್ಷೆಯನ್ನು ಘೋಷಿಸಿತ್ತಿದ್ದಂತೆ, ಕಟಕಟೆಯಿಂದಲೇ ತನ್ನ ಕಾಲಲ್ಲಿದ್ದ ಶೂವನ್ನು ತೆಗೆದು ವಿಜಯ ವಾಸು ಪೂಜಾರಿಯವರತ್ತ ತೂರಿದ್ದಾನೆ, ಆದರೇ ಅದು ಗುರಿ ತಪ್ಪಿ ಕೆಳಗೆ ಬಿತ್ತು. ಅಲ್ಲದೇ ವಕೀಲರಿಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ, ತಕ್ಷಣ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರಿಂದ ವಿಜಯವಾಸು ಪೂಜಾರಿ ಅವರು ಶುಕ್ರವಾರ ಆತನ ಮೇಲೆ ಉಡುಪಿ ನಗರ ಠಾಣೆಗೆ ದೂರ ನೀಡಿದ್ದಾರೆ ಮತ್ತು ಆತನಿಂದ ತನಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.


Spread the love