ನ.11 : ಹಿರಿಯ ಸಹಕಾರಿ ಸಾಧಕರಾದ ರಾಜೇಂದ್ರ ಕುಮಾರ್ ಮತ್ತು ರವಿರಾಜ್ ಹೆಗ್ಡೆಯವರಿಗೆ ಸಾರ್ವಜನಿಕ ಸನ್ಮಾನ
ಉಡುಪಿ : ಸಹಕಾರಿ ರಂಗಕ್ಕೆ ಹೊಸ ರೂಪ, ಆಯಾಮ, ಆಧುನಿಕತೆ, ಹೊಸತನದ ಹರಿಕಾರರಾದ ಸಹಕಾರ ರತ್ನ, ಮದರ್ ಥೆರೆಸಾ -ಸದ್ಭಾವನಾ ಪ್ರಶಸ್ತಿ, ಸಹಕಾರ ಬಂಧು ಆಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಅಪೆಕ್ಸ್ ಬ್ಯಾಂಕ್‍ನ ಮಾಜಿ ಅಧ್ಯಕ್ಷರು, ದ .ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ, ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಡಾ. ಎಂ .ಎನ್. ರಾಜೇಂದ್ರ ಕುಮಾರ್ ಹಾಗೂ ರಾಷ್ಟ್ರೀಯ ಡೈರಿ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತ ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷರಾದ ಕೆ. ರವಿರಾಜ್ ಹೆಗ್ಡೆ ಯವರಿಗೆ ಉಡುಪಿ ಜಿಲ್ಲಾ ಸಮಸ್ತ ಸಹಕಾರಿಗಳು ಹಾಗು ನವೋದಯ ಸ್ವ-ಸಹಾಯ ಸಂಘಗಳ ಪರವಾಗಿ ನವೆಂಬರ್ 11ರ ಶನಿವಾರ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಸಂಘಟಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ ನೀಡಿದರು.
ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಉಡುಪಿಯ ಪುರಭವನದಲ್ಲಿ ನಗರದ ಪ್ರಥಮ ಪ್ರಜೆ ನಗರಸಭಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಸುಮಾರು 10000 ಸಹಕಾರಿಗಳು ಹಾಗೂ ನವೋದಯ ಸ್ವಸಹಾಯ ಸಂಘದ ಸದಸ್ಯರ ಬೃಹತ್ ಮೆರವಣಿಗೆ ಹೊರಟು ಸಭಾಂಗಣ ಸೇರಲಿದೆ. ಮೆರವಣೆಗೆಯಲ್ಲಿ ಪ್ರಚಾರ ವಾಹನ, ಕೇರಳಚೆಂಡೆ, ಡ್ರಮ್ಸ್ ಅರ್ಕೆಸ್ಟ್ರಾ, ಕಲ್ಲಡ್ಕ ಗೊಂಬೆ, ಹುಲಿವೇಷ ಕುಣಿತ, ಪಂಚವಾದ್ಯ, ಹೊನ್ನಾವರ ಬ್ಯಾಂಡ್, ಎತ್ತಿನಗಾಡಿ, ಕೋಳಿ ಕುಣಿತ, ಡೊಳ್ಳು ಕುಣಿತ, ಕೀಲುಕುದುರೆ, ಪೂರ್ಣ ಕುಂಭ ಕಲಶದ ಸ್ವಾಗತದೊಂದಿಗೆ ಸನ್ಮಾನಿತರನ್ನು ಪುರಭವನದಿಂದ ಜೋಡುಕಟ್ಟೆಮಾರ್ಗವಾಗಿ, ಹಳೆ ಡಯಾನ ಸರ್ಕಲ್ ಆಗಿ ಸಾಗಿ ಕೋರ್ಟ್ ರಸ್ತೆ, ಮಿಷನ್ ಕಂಪೌಂಡ್ ಮಾರ್ಗವಾಗಿ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ವೇದಿಕೆಗೆ ಕರೆ ತರಲಾಗುವುದು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು, ಕಿರಿಯ ಯತಿಗಳು ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಆಶೀರ್ವಚನ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಇಂಧನ ಖಾತೆ ಸಚಿವರಾದ ಡಿ.ಕೆ. ಶಿವಕುಮಾರ್ ಅಭಿನಂದನೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮೀನುಗಾರಿಕೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಸರಳಾ ಬಿ ಕಾಂಚನ್ ಮತ್ತು ಇತರೆ ಗಣ್ಯರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಯಶ್‍ಪಾಲ್ ಸುವರ್ಣ, ಕೆಮ್ಮಣ್ಣು ಸತೀಶ್ ಶೆಟ್ಟಿ, ಪಡುಬಿದ್ರಿ ಸುಧೀರ್ ಕುಮಾರ್, ಪ್ರತಾಪ್ ಕುಮಾರ್ ಶೆಟ್ಟಿ ಸಾಸ್ತಾನ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ಶಿವಾಜಿ ಸುವರ್ಣ, ಅಣ್ಣಯ್ಯ ಸೇರಿಗಾರ್, ಜಯಕುಮಾರ್ ಪರ್ಕಳ, ಇನ್ನಂಜೆ ರಾಜೇಶ್ ರಾವ್, ವಿ. ಚಂದ್ರಹಾಸ್ ಶೆಟ್ಟಿ, ಸ್ಕ್ಯಾಡ್ಸ್‍ನ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಹಿರಿಯ ಸಹಕಾರಿಗಳಾದ ಕೃಷ್ಣರಾಜ ಸರಳಾಯ ಮತ್ತು ಇತರರು ಉಪಸ್ಥಿತರಿದ್ದರು.