ನ.12-13: ಉಡುಪಿಗೆ ಪರಿವರ್ತನಾ ಯಾತ್ರೆ; ಇರಾನಿ, ಫಡ್ನವಿಸ್, ಗಡ್ಕರಿ ಭಾಗಿ ಸಾಧ್ಯತೆ
ಉಡುಪಿ: ರಾಜ್ಯದ ಇತಿಹಾಸದಲ್ಲೇ 72 ದಿನದ ದಾಖಲೆಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪ ನೇತೃತ್ವದಲ್ಲಿ ಅರಂಭವಾಗಿರುವ ಪರಿವರ್ತನ ಯಾತ್ರೆ ನ. 12 ಮತ್ತು 13 ರಂದು ಉಡುಪಿ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.12ರಂದು ಬೆಳಗ್ಗೆ 10.45ಕ್ಕೆ ಹೆಜಮಾಡಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ 11 ಗಂಟೆಗೆ ಕಾಪು ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. 3 ಗಂಟೆಗೆ ಹೆಬ್ರಿ ಬಸ್ ನಿಲ್ದಾಣದಲ್ಲಿ , ಸಂಜೆ 6 ಗಂಟೆಗೆ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.
ನ.13ರಂದು ಬೆಳಗ್ಗೆ 11 ಗಂಟೆಗೆ ಕುಂದಾಪುರ ನೆಹರೂ ಮೈದಾನದಲ್ಲಿ ಹಾಗೂ 3 ಗಂಟೆಗೆ ಬೈಂದೂರಿನ ಕಿರಿ ಮಂಜೇಶ್ವರದ ಬಳಿಯ ಸಾಂದೀಪನಿ ಶಾಲೆ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಎಲ್ಲಾ ಸಭೆಯಲ್ಲಿ ಕೇಂದ್ರದ ಸಚಿವರು, ಮುಖಂಡರು ಭಾಗವಹಿಸಲಿದ್ದಾರೆ. ವಿವಿಧ ಪಕ್ಷದ, ಸಂಘಟನೆಯ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಕುಂದಾಪುರದ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಅವರು ಈಗಾಗಲೆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಶ್ರೀನಿವಾಸ ಪೂಜಾರಿ ಜಿಲ್ಲೆ ಚುನಾವಣಾ ಪ್ರಭಾರಿಯಾಗಿದ್ದಾರೆ. ಸಭೆಯಲ್ಲಿ ಸೃತಿ ಇರಾನಿ, ನಿತಿನ್ ಗಡ್ಕರಿ, ದೇವೇಂದ್ರ ಪಡ್ನವೀಸ್ ಭಾಗವಹಿಸುವಂತೆ ಕೋರಲಾಗಿದೆ ಎಂದು ಹೇಳಿದರು.