Home Mangalorean News Kannada News ನ.15ರಂದು ಮಂಗಳೂರಿನಲ್ಲಿ ಪವಿತ್ರ ಆರ್ಥಿಕತೆ ಸಮಾವೇಶ

ನ.15ರಂದು ಮಂಗಳೂರಿನಲ್ಲಿ ಪವಿತ್ರ ಆರ್ಥಿಕತೆ ಸಮಾವೇಶ

Spread the love

ನ.15ರಂದು ಮಂಗಳೂರಿನಲ್ಲಿ ಪವಿತ್ರ ಆರ್ಥಿಕತೆ ಸಮಾವೇಶ

ಮಂಗಳೂರುಃ ಮಹಾತ್ಮ ಗಾಂಧೀಜಿಯವರ ಸಿದ್ಧಾಂತದಡಿಯಲ್ಲಿ ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ನವೆಂಬರ್ 15ರಂದು ಮಂಗಳೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ, ಹೋರಾಟಗಾರ ಪ್ರಸನ್ನ ಹೆಗ್ಗೋಡು ಅವರು ಪ್ರಕಟಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಂಗಳೂರು ಮಾತ್ರವಲ್ಲದೆ, ಉಡುಪಿ, ಶಿವಮೊಗ್ಗ, ಸಾಗರ, ಹಾಸನ, ತುಮಕೂರು ನಗರಗಳಲ್ಲಿ ಪವಿತ್ರ ಆರ್ಥಿಕತೆ ಆಂದೋಲನ ನಡೆಯಲಿದೆ ಎಂದು ಪ್ರಸನ್ನ ಭಾನುವಾರ ಮಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪವಿತ್ರ ಆರ್ಥಿಕತೆಗಾಗಿ ಒತ್ತಾಯಿಸಿ ಬೆಂಗಳೂರಿನ ಗಾಂಧಿ ಭವನದ ಬಳಿಯ ವಲ್ಲಭ ನಿಕೇತನ ಆವರಣದಲ್ಲಿ ಆರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಪ್ರಸನ್ನ ಅವರು ಕೇಂದ್ರ ಸರಕಾರದ ಮನವಿಯ ಮೇರೆಗೆ ಅ.11ರಂದು ತಮ್ಮ ನಿರಶನವನ್ನು ಹಿಂತೆಗೆದುಕೊಂಡಿದ್ದರು.

ಕೃಷಿ ಮೊದಲಾದ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಸಬಲೀಕರಣ, ಗುಡಿ ಕೈಗಾರಿಕೆಗೆ ತೆರಿಗೆ ವಿನಾಯಿತಿ, ಕರ ಕುಶಲ ಉತ್ಪನ್ನಗಳಿಗೆ ಉತ್ತೇಜನ, ಸೇರಿದಂತೆ ‘ಪವಿತ್ರ ಆರ್ಥಿಕತೆ’ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಪ್ರಸನ್ನ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿದ್ದರು. ಕೇಂದ್ರ ಸರಕಾರ ಪರವಾಗಿ ಸಚಿನ ಡಿ.ವಿ.ಸದಾನಂದ ಗೌಡ ಅವರು ಒಂದು ತಿಂಗಳ ಕಾಲಾವಧಿಯನ್ನು ಕೇಳಿದೆ ಮೇರೆಗೆ ಹಿತೈಷಿಗಳ ಸಲಹೆಯಂತೆ ತಾತ್ಕಾಲಿಕವಾಗಿ ನಿರಶನ ನಿಲ್ಲಿಸಿದ್ದರು.

ಪವಿತ್ರ ಆರ್ಥಿಕತೆ ಎಂದರೆ, ಅತ್ಯಂತ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಕೊಡುವುದು. ನಮ್ಮ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಮಾನವನಿಗೂ ಹಾನಿಯಾಗದ ಮಾದರಿ ಆರ್ಥಿಕ ಚಟುವಟಿಕೆ. ಪ್ರಸ್ತುತ ನಮ್ಮ ಆರ್ಥಿಕತೆ ಬೇಡಿಕೆ ಮತ್ತು ಪೂರೈಕೆ ಮೇಲೆ ನಿಂತಿದೆ. ಆ ಪದ್ಧತಿಯನ್ನೇ ಪ್ರಸನ್ನ ಅವರು ವಿರೋಧಿಸುತ್ತಿದ್ದು, ಆರ್ಥಿಕತೆಯು ಅಗತ್ಯತೆ ಹಾಗೂ ಲಭ್ಯತೆ ಮೇಲೆ ಗಟ್ಟಿಯಾಗಿ ನಿಲ್ಲಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ಪವಿತ್ರ ಆರ್ಥಿಕತೆಯು ರಾಜಕೀಯ ಆಂದೋಲನ ಆಗಿರದೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಆಂದೋಲನವಾಗಿದೆ. ಮಾಹಾತ್ಮ ಗಾಂಧೀಜೀಯವರ ತತ್ವದಡಿಯಲ್ಲಿ ರಾಕ್ಷಸಿ ಬಂಡವಾಳಶಾಹಿ ಆರ್ಥಿಕತೆಯ ಅನಾಹುತಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ಇದಾಗಿದೆ ಎಂದು ಪ್ರಸನ್ನ ಹೇಳಿದರು.

ಇಂದು ವಿಶ್ವದಾದ್ಯಂತ ಯುವಜನತೆ ಬಂಡಾಯ ಎದ್ದಿದೆ. ಅಹಿಂಸಾ ಮಾರ್ಗದಲ್ಲಿ ಆಂದೋಲನ ನಡೆಸುತ್ತಿದೆ. ಇವುದಕ್ಕೆಲ್ಲ ಗಾಂಧೀ ಮಾರ್ಗವೇ ಮೂಲ ಸ್ಪೂರ್ತಿ. ವಿದೇಶಗಳಲ್ಲಿ ಮತ್ತೆ ಮೂಲಕ್ಕೆ ಹಿಂತಿರುಗದ ರೀತಿಯಲ್ಲಿ ಯಾಂತ್ರೀಕರಣ ಮಾಡಲಾಗಿದೆ. ಭಾರತದಲ್ಲಿ ಈ ಆಂದೋಲನ ಯಶಸ್ವಿ ಆಗುತ್ತದೆ ಎಂದವರು ಭರವಸೆಸ ವ್ಯಕ್ತಪಡಿಸಿದರು.

ಒಂದು ಕಡೆ ಆಧುನಿಕ ಯಂತ್ರೋಪಕರಣಗಳ ವ್ಯಾಪಕ ಬಳಕೆಯಿಂದಾಗಿ ನಿರುದ್ಯೋಗ ಹೆಚ್ಚುತ್ತಲೇ ಸಾಗಿದರೆ ಇನ್ನೊಂದು ಕಡೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವೇ ನಾಶವಾಗುತ್ತಿದೆ. ಅತ್ಯಮೂಲ್ಯವಾದ ಪ್ರಕೃತಿಯ ನಾಶದ ವಿಕೃತಿ ಹಾಗೂ ಅಮೂಲ್ಯ ಮಾನವ ಸಂಪನ್ಮೂಲಗಳ ನಿರ್ಲಕ್ಷತೆಗಳು ಭವಿಷ್ಯದ ಭಾರತವನ್ನು ವಿನಾಶದಂಚಿಗೆ ತಂದು ನಿಲ್ಲಿಸುವುದರಲ್ಲಿ ಸಂದೇಹವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಾಂಧೀಜಿ ಪ್ರಸ್ತುತ ಆಗುತ್ತಾರೆ. ಗಾಂಧಿಜೀಯವರ ತತ್ವಾದರ್ಶಗಳು ಮಾದರಿ ಆಗಲಿದ್ದು, ವಿನಾಶಕಾರಿ ಆರ್ಥಿಕತೆಯನ್ನು ನಿಯಂತ್ರಿಸಲು ಸಮಯೋಚಿತ ಜನಪರ ಆರ್ಥಿಕ ವ್ಯವಸ್ಥೆಯ ಅಗತ್ಯ ಇದೆ ಎಂದವರು ಹೇಳಿದರು.

ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ ಕಡಿಮೆ ಹೂಡಿಕೆ ಹೆಚ್ಚು ಜನರಿಗೆ ದುಡಿಮೆಯ ವ್ಯವಸ್ಥೆ ಮತ್ತು ಪರಿಸರವನ್ನು ನಾಶಮಾಡುವ ಜನವಿರೋಧಿ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದವರು ಹೇಳಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿದ ಟೆಕ್ಕಿಗಳು ಪ್ರಸನ್ನ ಅವರ ಆಂದೋಲನದಲ್ಲಿ ಸಕ್ರಿಯವಾಗಿ ಸೇರಿಕೊಂಡಿದ್ದು, ರೈತರು, ಕರಕುಶಲಕರ್ಮಿಗಳು,ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ.


Spread the love

Exit mobile version