ನ.17, 18ರಂದು ಉಡುಪಿ ನ್ಯಾಯಾಲಯ, ಉಡುಪಿ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ ವರ್ಷಾಚರಣೆ

Spread the love

ನ.17, 18ರಂದು ಉಡುಪಿ ನ್ಯಾಯಾಲಯ, ಉಡುಪಿ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ ವರ್ಷಾಚರಣೆ

ಉಡುಪಿ: ಉಡುಪಿ ನ್ಯಾಯಾಲಯ ಹಾಗೂ ಉಡುಪಿ ವಕೀಲ ಸಂಘದ ಸ್ಥಾಪನೆಯ 125ನೇ ವರ್ಷಾಚರಣೆಯನ್ನು ಇದೇ ನ.17 ಮತ್ತು 18ರಂದು ಉಡುಪಿ ನ್ಯಾಯಾಲಯದ ಆವರಣದಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿಜೃಂಭಣೆ ಯಿಂದ ಆಚರಿಸಲಾಗುತ್ತಿದೆ ಎಂದು ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಉಡುಪಿ ಪುರಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಗಳ ವಿವರಗಳನ್ನು ನೀಡಿ ಮಾತನಾಡಿದ ಮಟ್ಟಾರು, ಶತಮಾನೋತ್ತರ ರಜತ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮಕ್ಕೆ ನ.17ರ ಬೆಳಗ್ಗೆ 10ಗಂಟೆಗೆ ಕರ್ನಾಟಕದವರಾದ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ ಕುಮಾರ್ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗಳಾದ ಜ.ಎನ್.ವಿ. ಅಂಜಾರಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಈ ಸಂದರ್ಭ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿಗಳೂ ಪ್ರಸ್ತುತ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ರುವ ಮೂಡಬಿದ್ರೆಯ ಜ.ಎಸ್.ಅಬ್ದುಲ್ ನಝೀರ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯ ಹೈಕೋರ್ಟ್ನ ನ್ಯಾಯಾಧೀಶರು ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ಜ. ಇ.ಎಸ್. ಇಂದಿರೇಶ್ 125ರ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಾರ್ವಜನಿಕ ಸೇವಾ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ್, ರಾಜ್ಯ ಉಚ್ಛ ನ್ಯಾಯಾಯಲದ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ ಡಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ್ ಹಾಗೂ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ಪಾಲ್ಗೊಳ್ಳುವರು ಎಂದರು.

ಉದ್ಘಾಟನಾ ಸಮಾರಂಭದ ಬಳಿಕ ಕಾನೂನಿನ ವಿವಿಧ ವಿಷಯಗಳು, ಹೊಸದಾಗಿ ಅಳವಡಿಸಲಾಗಿರುವ ಕಾನೂನಿನ ಕುರಿತು ಹಿರಿಯ ನ್ಯಾಯ ಮೂರ್ತಿಗಳು, ಅನುಭವಿ ಹಿರಿಯ ವಕೀಲರು ವಿಷಯ ಮಂಡನೆ ಮಾಡಲಿದ್ದಾರೆ. ಮಧುಕರ್ ದೇಶಪಾಂಡೆ, ಜ. ರಾಮಚಂದ್ರ ಡಿ.ಹುದ್ದಾರ್, ಜ.ಸಿ.ಎಂ.ಜೋಷಿ ಹಾಗೂ ಬೆಂಗಳೂರಿನ ಎಸ್.ಶಂಕರಪ್ಪ ಯುವ ವಕೀಲರಿಗಾಗಿ ಹಾಗೂ ಕಾನೂನು ಆಸಕ್ತರಿಗಾಗಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದರು.

ಶತಮಾನೋತ್ತರ ರಜತ ಮಹೋತ್ಸವದ ಸಮಾರೋಪ ಸಮಾರಂಭ ನ.18ರ ಸಂಜೆ 4:30ಕ್ಕೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಧೀಶರು ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಹೈಕೋರ್ಟ್ನ ನ್ಯಾಯಾಧೀಶರಾದ ಜ. ಎಸ್.ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ..

ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಜ.ಶಿವಶಂಕರ್ ಬಿ. ಶ್ರೀಅಮರಣ್ಣವರ್, ಜ.ಸಿ.ಎಂ.ಜೋಷಿ, ಜ.ಟಿ.ಜಿ. ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣನವರ್ ಉಪಸ್ಥಿತರಿರುವರು.

ಎರಡೂ ದಿನಗಳಲ್ಲಿ 17ರ ಸಂಜೆ ಉಡುಪಿಯ ವೈಕುಂಠ ಬಾಳಿಕಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಉಡುಪಿ, ಕಾರ್ಕಳ, ಕುಂದಾಪುರಗಳ ವಕೀಲರ ಸಂಘದ ಸದಸ್ಯರಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ, 18ರಂದು ಪ್ರಾಣೇಶ ಗಂಗಾವತಿ ತಂಡದಿಂದ ನಗೆಹಬ್ಬ, ಖ್ಯಾತ ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಮತ್ತು ಅನನ್ಯ ಪ್ರಕಾಶ್ ಸಹಿತ ಕರ್ನಾಟಕ, ಕೇರಳ ಕಲಾವಿದರಿಂದ ಸಂಗೀತ ರಸಮಂಜರಿ ನಡೆಯಲಿದೆ.

ಜಿಲ್ಲಾ ಮುನ್ಸಿಫ್ ನ್ಯಾಯಾಲಯ ಎಂದು ಕರೆಸಿಕೊಳ್ಳುವ ಉಡುಪಿ ನ್ಯಾಯಾಲಯ 1899ರಲ್ಲಿ ಸಾಮಂತ ರಾಜರು ಆಳು ತಿದ್ದ, ಕರಾವಳಿಯಲ್ಲಿ ಅಂದು ಪ್ರಮುಖ ಪಟ್ಟಣವಾದ ಬಾರಕೂರಿನಲ್ಲಿ ಪ್ರಾರಂಭಗೊಂಡಿತ್ತು. ಅಂದು ಪಕ್ಕದ ಹಂಗಾರಕಟ್ಟೆ ಕರಾವಳಿಯ ಪ್ರಮುಖ ಸ್ವಾಭಾವಿಕ ಬಂದರಾಗಿತ್ತು ಎಂಬುದು ಅಂದಿನ ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಉಡುಪಿ ನ್ಯಾಯಾಲಯ ಹಾಗೂ ಉಡುಪಿ ವಕೀಲರ ಸಂಘಗಳ ಶತಮಾನೋತ್ಸವ 1999ರಲ್ಲಿ ಆಗಿದ್ದು, 2003ರಲ್ಲಿ ಶತಮಾನೋತ್ಸವ ವರ್ಷಾಚರಣೆ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಂದಿನ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಎನ್.ಸಂತೋಷ್ ಹೆಗ್ಡೆ ಅವರು ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯಮೂರ್ತಿಗಳಾದ ಎನ್.ಕೆ.ಜೈನ್ ಅಧ್ಯಕ್ಷತೆ ವಹಿಸಿದ್ದರು ಎಂದು ಮಟ್ಟಾರು ವಿವರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ವಕೀಲರ ಸಂಘದ ಸದಸ್ಯರಾಗಿ ವೃತ್ತಿ ಬದುಕು ಆರಂಭಿಸಿ, ನಾಡಿನ ವಿವಿದೆಡೆಗಳಲ್ಲಿ ನ್ಯಾಯಾಧೀಶರಾಗಿ, ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುತ್ತಿರುವ 22 ಮಂದಿಯನ್ನು ಸನ್ಮಾನಿಸಲಾ ಗುವುದು ಎಂದು ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ಕುಮಾರ್ ತಿಳಿಸಿದರು.

ಇದೇ ಸಂದರ್ಭ ಉಡುಪಿ ವಕೀಲರ ಸಂಘದ ಸದಸ್ಯರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡ್ನ ಬಿಡುಗಡೆಯೂ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ಹಾಗೂ ಪದಾಧಿಕಾರಿಗಳಾದ ಮಿತ್ರಕುಮಾರ್ ಶೆಟ್ಟಿ, ಎಂ.ಶಾಂತಾರಾಮ್ ಶೆಟ್ಟಿ, ಅಸದುಲ್ಲಾ ಕಟಪಾಡಿ, ಎನ್.ಕೆ. ಆಚಾರ್ಯ, ಬಿ.ನಾಗರಾಜ್, ಆನಂದ ಮಡಿವಾಳ, ಬೈಲೂರು ರವೀಂದ್ರ ದೇವಾಡಿಗ, ಗಂಗಾಧರ ಎಚ್.ಎಂ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಅಮೃತಕಲಾ, ಆರೂರು ಸುಕೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


Spread the love