ನ.26-29 ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ
ಕುಂದಾಪುರ: ಕಾರ್ಟೂನು ಕಲೆಯ ಬಗೆಗೆ ಒಲವು ಬೆಳೆಸುತ್ತಾ, ಜನಸಾಮಾನ್ಯರು ಹಾಗೂ ಯುವ ಪೀಳಿಗೆಯಲ್ಲಿ ಕಾರ್ಟೂನು ಬಗೆಗೆ ಅಭಿರುಚಿಯನ್ನು ಬೆಳೆಸುವ ಉದ್ದೇಶದೊಂದಿಗೆ ಸತತ ಮೂರು ವರ್ಷಗಳಿಂದ ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಜರುಗುತ್ತಿರುವ ‘ಕಾರ್ಟೂನು ಹಬ್ಬ’ ಈ ಭಾರಿಯೂ ನ.26 ರಿಂದ ನ29ರ ವರೆಗೆ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾ ಮಂದಿರದಲ್ಲಿ (ಬೋರ್ಡ್ ಹೈಸ್ಕೂಲ್) ಜರುಗಲಿದೆ.
ಕಾರ್ಟೂನು ಕುಂದಾಪ್ರ, ವಿಭಿನ್ನ ಐಡಿಯಾಸ್ ಅರ್ಪಿಸುವ ಟಿಎನ್ಎಸ್ ‘ಕಾರ್ಟೂನು ಹಬ್ಬ’ ನವೆಂಬರ್ 26ರಂದು ಚಾಲನೆಗೊಳ್ಳಲಿದೆ. ಕಾರ್ಟೂನು ಹಬ್ಬದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಮೊಗ್ಗು ಸ್ವರ್ಧೆ, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ಸೈಬರ್ ಕಾರ್ಟೂನು ಸ್ವರ್ಧೆ, ಕ್ಯಾರಿಕೇಚರ್, ಡೈಲಾಗ್ ರೈಟಿಂಗ್ ಹಾಗೂ ಸೆಲ್ಫಿ ಕಾರ್ನ್ರ್ ಸ್ವರ್ಧೆಗಳು ಜರುಗಲಿದೆ.
ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗಿನ ಮಾತುಕತೆ ‘ಮಾಸ್ಟರ್ ಸ್ಟ್ರೋಕ್’, ಲೈವ್ ಕ್ಯಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ ನೀಡುವ ‘ಚಿತ್ರನಿಧಿ’, ಭವಿಷ್ಯದ ಪತ್ರಕರ್ತರೊಂದಿಗೆ ಎಡಿಟೋರಿಯಲ್ ಕಾರ್ಟೂನ್ ಒಳಪದರವನ್ನು ಹಂಚಿಕೊಳ್ಳುವ ಎಟಿಟೋನ್ಸ್ ಕಾರ್ಯಗಾರ ಪ್ರತಿದಿನವೂ ವಿವಿಧ ವಿಚಾರ ಮಂಡನೆ, ಮಾತುಕತೆ ನಡೆಯಲಿದೆ.
ಕುಂದಾಪುರ ಮೂಲದ ವ್ಯಂಗ್ಯಚಿತ್ರಕಾರರಿಗೆ ಗೌರವ ಸಲ್ಲಿಕೆ, ಕಾರ್ಟೂನು ಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯತೆಗಳನ್ನು ಒಳಗೊಂಡಿರುವ ಕಾರ್ಟೂನು ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.