Home Mangalorean News Kannada News ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ

ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ

Spread the love

ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ

ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ನವಂಬರ್ 28ರಂದು ಬೆಳಿಗ್ಗೆ 7-30ರ ಶುಭ ಮುಹೂರ್ತದಲ್ಲಿ ಚಾಲನೆ ನೀಡಲಾಗುವುದು ಎಂದು ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಮಹತ್ತರ ಯೋಜನೆಗೆ ಒಟ್ಟು 100 ಕೆ.ಜಿ ಬಂಗಾರದ ಅಗತ್ಯವಿದೆ. ಈಗಾಗಲೇ ಭಕ್ತರಿಂದ ಸುಮಾರು 60 ಕೆ.ಜಿಗಿಂತ ಹೆಚ್ಚು ಬಂಗಾರದ ಸಂಗ್ರಹವಾಗಿದೆ. ಸುಮಾರು 32 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು ಶ್ರೀಕೃಷ್ಣಮಠದ ಗರ್ಭಗುಡಿಯ ಒಟ್ಟು ವಿಸ್ತೀರ್ಣ ಸುಮಾರು 2500 ಚದರಡಿ ಮೇಲ್ಛಾವಣಿಗೆ ಚಿನ್ನದ ತಗಡನ್ನು ಮಡಾಯಿಸಲಾಗುವುದು. ಈ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದಿಸುವ ಯೋಜನೆಯಾಗಿತ್ತಾದರೂ ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಮಡಾಯಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ಕೆ ಬೆಳ್ಳಿಯ ತಗಡಿಗೆ 500 ಕೆ.ಜಿ ಬೆಳ್ಳಿಯ ಅಗತ್ಯವಿದೆ. ಗರಿಷ್ಠಪ್ರಮಾಣದ ಚಿನ್ನದ ಬಳಕೆಯಾಗಬೇಕೆಂಬ ಉದ್ದೇಶದಿಂದ ಈ ಮಾರ್ಪಾಟನ್ನು ಮಾಡಲಾಗಿದೆ.

ಪಾದರಸ, ರ್ಯಾಕರಿ ತಂತ್ರಜ್ಞಾನದಿಂದ ಕಾಮಗಾರಿ ನಡೆಸಿದರೆ ಚಿನ್ನದ ಪ್ರಮಾಣ ನಷ್ಟವಾಗುತ್ತದೆ. ಬಂಗಾರವನ್ನು ಬೆಳ್ಳಿ ತಗಡಿನ ಮೇಲೆ ಎರಕಹೊಯ್ದು ಕೆಲಸ ನಿರ್ವಹಿಸಲಾಗುವುದು. ಹೀಗೆ ಮಾಡಿದರೆ ಗರಿಷ್ಠಪ್ರಮಾಣದ ಚಿನ್ನವು ಬಳಕೆಯಾಗುತ್ತದೆ ಎಂದು ತಜ್ಞರ್ ತಿಳಿಸಿದ್ದಾರೆ.

ಚಿನ್ನದ ಗೋಪುರಕ್ಕೆ ಹೆಚ್ಚಿನ ಆಕರ್ಷಣೆಯ ಉದ್ದೇಶದಿಂದ ಕರಾವಳಿಯ ಸಂಸ್ಕೃತಿ ಎನಿಸಿದ ಹಂಚಿನ ಆಕೃತಿಯನ್ನು ರೂಪಿಸಲಾಗುವುದು. ಇದರಿಂದ ಕುಶಲಕರ್ಮಿಗಳ ನೈಪುಣ್ಯದ ಅಭಿವ್ಯಕ್ತಿಯೂ ಆಗುತ್ತದೆ.

ಸು-ವರ್ಣ ಗೋಪುರದ ವಿಶೇಷ :

ಈ ಸುವರ್ಣ ಗೋಪುರದ ತಗಡಿನಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ “ಸರ್ವಮೂಲಗ್ರಂಥಗಳನ್ನು” ಬರೆಸಲಾಗುವುದು. ಎಲ್ಲಾ ಸಂಕಷ್ಟಗಳನ್ನು ಪರಿಹರಿಸಿ ಐಹಿಕ ಮತ್ತು ಪಾರತ್ರಿಕ ಆನಂದವನ್ನು ಕೊಡುವ ಈ ಗ್ರಂಥಗಳನ್ನು ಲಿಪಿಬದ್ಧಗೊಳಿಸಿರುವ ಕೀರ್ತಿ ಶ್ರೀ ಪಲಿಮಾರು ಮಠದ ಮೂಲ ಯತಿಗಳಾದ ಶ್ರೀ ಶ್ರೀಹೃಷೀಕೇಶತೀರ್ಥರಿಗೆ ಸಲ್ಲುತ್ತದೆ. ಈ ಮೂಲಕೃತಿಯು ಇಂದಿಗೂ ಶ್ರೀ ಮಠದಲ್ಲಿ ಪೂಜೆಗೊಳ್ಳುತ್ತಿದೆ. ಇದು ಶ್ರೀಮನ್ಮಧ್ವಾಚಾರ್ಯರ ಪ್ರತಿರೂಪ ಎನಿಸಿದೆ. ಇಂತಹ ಮಹತ್ವದ ಕೃತಿಯನ್ನು ಶ್ರೀಕೃಷ್ಣಮಠದ ಚಿನ್ನದ ಗೋಪುರದಲ್ಲಿ ಬರೆಸುವುದು ಒಂದು ಐತಿಹಾಸಿಕ ಕಾರ್ಯವೆನಿಸಿದೆ.

ಅದರಂತೆಯೇ ಭಾರತೀಯ ಅಧ್ಯಾತ್ಮಿಕ ಸಂದೇಶದ ಹಿನ್ನೆಲೆಯಲ್ಲಿ ನಿರ್ಮಾಣಗೊಂಡ ಈ ಗರ್ಭಗುಡಿಯ ಮೇಲ್ಛಾವಣಿಯಲ್ಲಿ 21600 “ಹಂಸ” ಮಂತ್ರವನ್ನುದಾಖಲಿಸಲಾಗುವುದು. ಒಂಬತ್ತು ಕಿಂಡಿಯುಳ್ಳ ಈ ಗರ್ಭಗುಡಿ ಒಂಬತ್ತು ದ್ವಾರವುಳ್ಳ ಈ ನಮ್ಮ ದೇಹಕ್ಕೆ ಸಂಕೇತವೆನಿಸಿದೆ. ಗರ್ಭಗುಡಿಯೊಳಗೆ ಕಂಗೊಳಿಸುವ ಶ್ರೀಕೃಷ್ಣ ಪರಬ್ರಹ್ಮನೇ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿಯಾದ ಸ್ವಾಮಿ. ಇವನ ಜೊತೆಯಲ್ಲಿ ಇವನ ಪ್ರೇರಣೆಯಂತೆ ಅಖಂಡ ಬ್ರಹ್ಮಾಂಡದ ಸಮಸ್ತ ಜೀವರ ನಿಯಾಮಕರಾಗಿರುವ ಶ್ರೀಮುಖ್ಯಪ್ರಾಣದೇವರು 21600 ಬಾರಿ ಹಂಸಮಂತ್ರವನ್ನು ಜಪಿಸುತ್ತಾ ನೆಲೆಸಿರುವರು. ಇವರ ದಯದಿಂದಲೇ ನಮ್ಮ ಜೀವಮಾನದ ಅನುಕ್ಷಣದ ಶ್ವಾಸೋಚ್ಛ್ವಾಸದ ಕ್ರಿಯೆಯು ನಡೆಯುತ್ತಿರುವುದು. ಈ ಶ್ವಾಸೋಚ್ಛ್ವಾಸವು ದಿನಕ್ಕೆ 21600 ಬಾರಿ ನಡೆಯುವುದು.

ಈ ಶ್ರೀಕೃಷ್ಣ-ಮುಖ್ಯಪ್ರಾಣರ ನಿರಂತರ ಪರಮೋಪಕಾರದ ಸ್ಮರಣೆ ಹಾಗು ಕೃತಜ್ಞತಾರ್ಪಣೆಗೆ ಸಂಕೇತವಾಗಿ 21600 ಬಾರಿ ಹಂಸಮಂತ್ರವನ್ನು ಗೋಪುರದಲ್ಲಿ ದಾಖಲಿಸಲಾಗುವುದು. ಈ ಎಲ್ಲಾ ಅನುಸಂಧಾನದಿಂದ ಶ್ರೀಕೃಷ್ಣನ ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಬರುವ ಪ್ರತಿಯೊಬ್ಬ ಭಕ್ತರಿಗೂ ಸಕಲಾನಿಷ್ಟ ನಿವೃತ್ತಿಯೊಂದಿಗೆ ಸಕಲಾಭೀಷ್ಟ ಪ್ರಾಪ್ತಿಯಾಗುವುದು.

ಸುವರ್ಣಗೋಪುರದ ಕಾಮಗಾರಿಯನ್ನು ಶ್ರೀಕೃಷ್ಣಭಕ್ತರಿಗೆ ಕಾಣುವಂತೆ ಶ್ರೀಕೃಷ್ಣಮಠದ ಗೋಶಾಲೆಯ ಮುಂದೆ ಯಾಗಶಾಲೆಯ ಸಮೀಪ ನಡೆಸಲಾಗುವುದು.

ಬಂಗಾರದ ಕೆಲಸದಲ್ಲಿ ನಿಷ್ಣಾತರಾದ ದೈವಜ್ಞಸಮಾಜ ಹಾಗೂ ವಿಶ್ವಕರ್ಮಸಮಾಜದ ಕುಶಲಕರ್ಮಿ ಶ್ರೀಕೃಷ್ಣಭಕ್ತರ ಸಹಕಾರದೊಂದಿಗೆ ಈ ಸುವರ್ಣಗೋಪುರದ ನಿರ್ಮಾಣದ ಯೋಜನೆಯನ್ನು ನಡೆಸಲಾಗುವುದು. ಇದರಲ್ಲಿ ಮರದ ಕೆಲಸ, ಬೆಳ್ಳಿ ಹಾಗೂ ಬಂಗಾರದ ಕೆಲಸವೂ ಇರುವುದರಿಂದ ಈ ಎರಡೂ ಸಮಾಜದ ಕುಶಲಕರ್ಮಿಗಳೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಗತಿ ಅಸೋಸಿಯೇಶಟ್ನ ಶ್ರೀ ಯು. ವೇಂಕಟೇಶ ಶೇಟ್ ಈ ನಿರ್ಮಾಣಯೋಜನೆಯ ಉಸ್ತುವಾರಿಯಾಗಿ ಶ್ರೀಕೃಷ್ಣನ ಸೇವೆಯನ್ನು ಮಾಡುತ್ತಾರೆ.

ಸುವರ್ಣ ಗೋಪುರದ ಕಾರ್ಯಾರಂಭದ ಬಳಿಕ ಸುಮಾರು 4 ತಿಂಗಳುಗಳ ಅಗತ್ಯವಿದೆ ಎಂದು ಕುಶಲಕರ್ಮಿಗಳು ತಿಳಿಸಿದ್ದಾರೆ. ಬರುವ ಮಳೆಗಾಲದ ಒಳಗಾಗಿ ಶ್ರೀ ರಾಮನವಮಿಯ ಶುಭಸಂದರ್ಭದಲ್ಲಿ ಈ ಸುವರ್ಣಗೋಪುರವನ್ನು ಸಕಲ ಶ್ರೀಕೃಷ್ಣಭಕ್ತರ ಸಂಪೂರ್ಣ ಭಕ್ತಿಯ ರೂಪದ ಸಹಕಾರದೊಂದಿಗೆ ಪೂರ್ಣಗೊಳಿಸಿ ಶ್ರೀಕೃಷ್ಣನಿಗೆ ಸಮರ್ಪಿಸುವ ಉದ್ದೇಶವಿದೆ.

ಈ ಹಿನ್ನೆಲೆಯಲ್ಲ್ಲಿ ಪರಮಪೂಜ್ಯರಾದ ಶ್ರೀಪೇಜಾವರ ಮಠದ ಶ್ರೀ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಅದಮಾರುಮಠದ ಶ್ರೀ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಸೋಸಲೆ ವ್ಯಾಸರಾಜಮಠದ ಶ್ರೀ ಶ್ರೀವಿದ್ಯಾಶ್ರೀಶ ತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀಸುವಿದ್ಯೇಂದ್ರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಸುವರ್ಣಗೋಪುರದ ಕಾರ್ಯಾರಂಭೋತ್ಸವವನ್ನು ನೆರವೇರಿಸುವರು.

ಈ ಶುಭಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಜಯಮಾಲಾ, ಉಡುಪಿ ಕ್ಷೇತ್ರದ ಶಾಸಕರಾದ ಕೆ.ರಘುಪತಿ ಭಟ್, ವಿಧಾನಪರಿಷತ್ ಸದಸ್ಯರು ಹಾಗೂ ಕರ್ನಾಟಕ ಜ್ಯುವೆಲ್ಲರ್ಸ್ ಅಸೋಸಿಯೇಶನ್ನ ಅಧ್ಯಕ್ಷರಾದ ಟಿ.ಎ.ಶರವಣ, ಹೊಸಪೇಟೆಯ ಕೈಗಾರಿಕೋದ್ಯಮಿ ಪತ್ತಿಕೊಂಡ ಪ್ರಭಾಕರ್ , ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಅಸೋಸಿಯೇಶನ್ನ ಚೇರ್ಮೆನ್ ಜಯಾಚಾರ್ಯ ಮೊದಲಾದ ಶ್ರೀ ಕೃಷ್ಣಭಕ್ತರು ಅಭ್ಯಾಗತರಾಗಿ ಆಗಮಿಸಲಿದ್ದಾರೆ ಎಂದರು.


Spread the love

Exit mobile version