ನ. 6: ಕಾಂಗ್ರೆಸ್ “ಗಾಂಧಿ150” ಉಡುಪಿ ಜಿಲ್ಲಾ ಮಟ್ಟದ ಕಾರ್ಯಕ್ರಮದ ಸಮಾರೋಪ
ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಆಯೋಜಿಸಿದ ಗಾಂಧಿ 150 ಕಾರ್ಯಕ್ರಮದ ಸಮಾರೋಪ ಮತ್ತು ಸಂಘಟನೆಯ ವತಿಯಿಂದ ಬಡ ದಲಿತ ಮಹಿಳೆಗೆ ನಿರ್ಮಿಸಿದ ಗಾಂಧಿ ಕುಟೀರದ ಉದ್ಘಾಟನೆ ಕಾರ್ಯಕ್ರಮ ನವೆಂಬರ್ 6ರಂದು ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಶನಿವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ವರ್ಷವಿಡೀ ಗಾಂಧಿ 150 ಕಾರ್ಯಕ್ರಮದಡಿಯಲ್ಲಿ ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ಫೆಬ್ರವರಿಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಉದ್ಯಾವರ ಬೊಳ್ಜೆಯಿಂದ ಉಡುಪಿ ತನಕ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಇದಲ್ಲದೆ ನಿರಂತರ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅಜ್ಜರಕಾಡು ಟೌನ್ ಹಾಲ್ ನಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ದಿನೇಶ ಗುಂಡುರಾವ್ (ಅಧ್ಯಕ್ಷರು ಕೆ.ಪಿ.ಸಿ.ಸಿ) ಸಿದ್ಧರಾಮಯ್ಯ (ವಿರೋಧ ಪಕ್ಷದ ನಾಯಕರು), ಓಸ್ಕರ್ ಫೆರ್ನಾ ಡೀಸ್ (ರಾಜ್ಯ ಸಭಾ ಸದಸ್ಯರು) ರಮೇಶ ಕುಮಾರ(ಮಾಜಿ ಸ್ಪೀಕರ್ ವಿಧಾನ ಸಭೆ) ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಸಲಹ ಮಂಡಳಿಯ ಸದಸ್ಯರು ಆಗಿರುವ ಡಿ ಆರ್ ಪಾಟೀಲ್ ಸಿ.ನಾರಾಯಣ ಸ್ವಾಮಿ,ಸನ್ಮಾನ್ಯ ವಿ ವೈ ರ್ಗೋಪಡೆ, ಬಿ.ಎಲ್ ಶಂಕರ ಮಾಜಿ ಸಂಸದರು, ವಿಷ್ಣು ನಾಥನ್( ಎ.ಐ.ಸಿ.ಸಿ ಕಾರ್ಯದರ್ಶಿ ಹಾಗೂ ಈ ಭಾಗದ ಉಸ್ತುವಾರಿ) ಬಿ. ಎಂ ಸಂದೀಪ್(ಎ.ಐ.ಸಿ.ಸಿ ಕಾರ್ಯ ದರ್ಶಿ) ರಂಗಸ್ವಾಮಿ (ರಾಜ್ಯಸಂಚಾಲಕರು ಆರ್. ಜಿ. ಪಿ.ಆರ್. ಎಸ್) ವಿಜಯ್ ಸಿಂಗ್ (ವಿಧಾನಪರಿಷತ್ ಸದಸ್ಯರು) ಡಾ ಪುಷ್ಪ ಅಮರನಾಥ್ (ಅಧ್ಯಕ್ಷರು ರಾಜ್ಯ ಮಹಿಳಾ ಕಾಂಗ್ರೆಸ್) ಮಾಜಿ ಸಚಿವರುಗಳಾದ ವಿನಯ ಕುಮಾರ ಸೊರಕೆ, ಮಾಜಿ ಶಾಸಕರುಗಳಾದ ಗೋಪಾಲ ಪೂಜಾರಿ, ಯು. ಆರ್ ಸಭಾಪತಿ ಹಾಗೂ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಅಶೋಕ ಕೂಡವೂರು ಹಾಗೂ ಉಡುಪಿ ಜಿಲ್ಲೆಯ ಮುಂಚೂಣಿ ಕಾಂಗ್ರೆಸ್ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ನವೆಂಬರ್ 6 ರಂದು ಎಲ್ಲಾ ಅತಿಥಿಗಳನ್ನು ಬೆಳಿಗ್ಗೆ 9.30 ಕ್ಕೆ ಹೆಜಮಾಡಿ ಗಡಿಯಲ್ಲಿ ಸ್ವಾಗತಿಸಿ ಬಳಿಕ ಉದ್ಯಾವರ ಬಲಾಯಿಪಾದೆ – ಕೊರಂಗ್ರಪಾಡಿ ಬಳಿ ನಿರ್ಮಿಸಲಾಗಿರುವ ಗಾಂಧಿ ಕುಟೀರವನ್ನು ದಲಿತ ಮಹಿಳೆ ನಳಿನಿಗೆ ಹಸ್ತಾಂತರಿಸಲಿದ್ದಾರೆ. ಇದೇ ವೇಳೆ ದಲಿತ ಮಹಿಳೆ ನಳಿನಿಗೆ ರೂ 1 ಲಕ್ಷ ಧನ ಸಹಾಯವನ್ನು ಕೂಡ ನೀಡಲಾಗುತ್ತದೆ ಎಂದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಕಳೆದ ಬಾರಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಾವೇಶ ಪುರಭವನದಲ್ಲಿ ಜರುಗಲಿದೆ ಎಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಆರ್ ಜಿ ಪಿ ಆರ್ ಎಸ್ ಸಂಘಟನೆಯ ಸಂಯೋಜಕಿ ರೋಶನಿ ಒಲಿವೇರಾ ಅವರು ಮಾತನಾಡಿ ಸಂಘಟನೆಯ ಕೇಂದ್ರ ಸಂಯೋಜಕಿ ಜಯಂತಿ ನಟರಾಜನ್ ಅವರು ಗಾಂಧೀಜಿಯವರ 150ನೇ ವರ್ಷಾಚರಣೆ ಪ್ರಯುಕ್ತ ನಿರಂತರ ಒಂದು ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದು ಅದರಂತೆ ಜಿಲ್ಲೆಯಲ್ಲಿ ಎರಡು ಬಡ ಮಹಿಳೆಯರಿಗೆ ಮನೆಕಟ್ಟಲು ಯೋಜನೆ ರೂಪಿಸಿದ್ದು ಜಿ್ಲ್ಲೆಯ `10 ಬ್ಲಾಕ್ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 10 ಬ್ಲಾಕ್ ಗಳಿಂದ 7 ಅರ್ಜಿಗಳು ಬಂದಿದ್ದು ಅಗತ್ಯವಿರುವ 2 ಕುಟುಂಬಗಳಿಗೆ ಮನೆ ನಿರ್ಮಿಸಲು ನಿರ್ಧಾರ ಮಾಡಿದ್ದು ಅದರಂತೆ ನಳಿನಿಯವರ ಮನೆಯನ್ನು ನಿರ್ಮಿಸಲಾಗಿದ್ದು ಕಾರ್ಕಳದ ಇನ್ನೋರ್ವ ಬಡ ಮಹಿಳೆಯ ಮನೆ ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಂಘಟನೆಯ ಸಹ ಸಂಯೋಜಕಿ ಮೇರಿ ಡಿಸೋಜಾ, ಸೋಮನಾಥ್, ಅಮೃತಾ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು.