ಪಂಚಭೂತಗಳಲ್ಲಿ ಲೀನವಾದ ಅನೂಪ್ ಪೂಜಾರಿಯವರ ಪಾರ್ಥಿವ ಶರೀರ
ಕುಂದಾಪುರ: ಭಾರತದ ಗಡಿಭಾಗವಾದ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾದ ಯೋಧ ಅನೂಪ್ ಪೂಜಾರಿ (31) ಅವರ ಪಾರ್ಥಿವ ಶರೀರ ಹುಟ್ಟೂರಾದ ಬೀಜಾಡಿಗೆ ಗುರುವಾರ ಬೆಳಿಗ್ಗೆ ತಲುಪಿದ್ದು, ಮಧ್ಯಾಹ್ನದ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕಾಶ್ಮೀರದಲ್ಲಿ ಮೃತ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಂಗಳೂರಿಗೆ ವಿಮಾನದಲ್ಲಿ ಶವ ಪೆಟ್ಟಿಗೆಯಲ್ಲಿ ಬಂದ ಪಾರ್ಥೀವ ಶರೀರವನ್ನು ಗುರುವಾರ ಮುಂಜಾನೆ 2:30ಕ್ಕೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ ಬರಮಾಡಿಕೊಂಡರು. ಬೆಳಿಗ್ಗೆ ಉಡುಪಿಯಿಂದ ಅಲಂಕೃತ ವಾಹನದಲ್ಲಿ ಹುಟ್ಟೂರಿನತ್ತ ಸಾಗಿ ಬಂದ ಯೋಧನ ಪಾರ್ಥೀವ ಶರೀರಕ್ಕೆ ರಾ.ಹೆದ್ದಾರಿ-66ರ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಅನೂಪ್ ಪೂಜಾರಿ ಅಮರ್ ರಹೇ.. ಎನ್ನುವ ಉದ್ಘೋಷಣೆ ಕೂಗುತ್ತಾ, ಹೂವುಗಳನ್ನು ಚೆಲ್ಲುತ್ತಾ ಅಂತಿಮ ನಮನ ಸಲ್ಲಿಸಿದರು. ರಾ. ಹೆದ್ದಾರಿಯೂದ್ದಕ್ಕೂ ಜನಪ್ರತಿನಿಧಿಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ತೆಕ್ಕಟ್ಟೆಯಲ್ಲಿ ಪಾರ್ಥೀವ ಶರೀರವನ್ನು ಸ್ವೀಕರಿಸಿದ ಕುಂದಾಪುರದ ಉಪವಿಭಾಗಾಧಿಕಾರಿ ಮಹೇಶ್ಚಂದ್ ಹಾಗೂ ತಹಸೀಲ್ದಾರ್ ಎಚ್.ಎಸ್ ಶೋಭಾಲಕ್ಷ್ಮೀ ಅವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಪಾರ್ಥೀವ ಶರೀರವನ್ನು ಬೀಜಾಡಿ ಗ್ರಾಮದ ಕೆರೆಮನೆಯಲ್ಲಿನ ಅನೂಪ್ ಅವರ ಮನೆಗೆ ತರಲಾಯಿತು. ನೆರೆದಿದ್ದ ಸಾವಿರಾರು ಮಂದಿಯ ಕಣ್ಣೀರಧಾರೆ ಹಾಗೂ ಅಮರ್ ರಹೇ ಎನ್ನುವ ಘೋಷಣೆಗಳ ನಡುವೆ ಕುಟುಂಬಿಕರು ಅಂತಿಮ ವಿಧಿಯನ್ನು ನಡೆಸಿದರು.
ಅಪರ ಜಿಲಾಧಿಕಾರಿ ಮಮತಾ ದೇವಿ ಜಿ. ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಜಿಲ್ಲಾ ಶಸಸ್ತೃ ಮೀಸಲು ಪಡೆಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಕುಶಲ ತೋಪುಗಳನ್ನು ಹಾರಿಸಿ ಗೌರವ ನಮನ ಸಲ್ಲಿಸಿದರು.
ಕಣ್ಣೀರ ಅಶ್ರುತರ್ಪಣ:
ಅನೂಪ್ ಪೂಜಾರಿ ಅವರು ಕಲಿತ ಶಾಲೆಯಾದ ಬೀಜಾಡಿಯ ಪಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾರ್ಥೀವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಸರತಿಯಲ್ಲಿ ಬಂದು ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದು ಕಣ್ಣೀರ ಅಶ್ರುತರ್ಪಣ ಸಲ್ಲಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ರಘುಪತಿ ಭಟ್, ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್, ಮಾಜಿ ಸೈನಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಅಗಲಿದ ಯೋಧನಿಗೆ ಗೌರವ ವಂದನೆ ಸಲ್ಲಿಸಿದರು.
ಸರತಿ ಸಾಲುಗಳ ಮೇಲುಸ್ತುವಾರಿ, ಅಂತಿಮ ದರ್ಶನದ ವ್ಯವಸ್ಥೆ, ಅಂತಿಮ ಸಂಸ್ಕಾರದ ಸಿದ್ದತೆಗಳು ಸೇರಿದಂತೆ ಬಹುತೇಕ ಕಾರ್ಯಗಳ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿಯೇ ವಹಿಸಿಕೊಂಡ ಸ್ಥಳೀಯ ಯುವಕರು ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಬಂದ ಊರ ಹಾಗೂ ಪರವೂರ ದೇಶಭಕ್ತ ಜನರಿಗೆ ಸ್ವಲ್ಪವೂ ನೋವಾಗದಂತೆ ಎಚ್ಚರಿಕೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಸೇನೆಯಿಂದ ಗೌರವ ವಂದನೆ:
ಕಾಶ್ಮೀರದಿಂದ ಪಾರ್ಥೀವ ಶರೀರದ ಜೊತೆಗೆ ಬಂದಿದ್ದ ಭಾರತೀಯ ಭೂಸೇನೆಯ ಮರಾಠ ರೆಜಿಮೆಂಟ್ ನ ಲೈಟ್ ಇನ್ಫೆಂಟ್ರಿ ಬೆಟಾಲಿಯನ್ ನ ಸಹೋದ್ಯೋಗಿ ಯೋಧರು ಹಾಗೂ ಅಧಿಕಾರಿಗಳು ಅಂತ್ಯ ಸಂಸ್ಕಾರದ ಕೊನೆಯವರೆಗೂ ಉಪಸ್ಥಿತರಿದ್ದರು. ಅರಬ್ಬಿ ಕಡಲಿನ ತೀರದಲ್ಲಿ ನಿರ್ಮಿಸಲಾದ ಚಿತೆಯ ಮುಂದೆ ಪಾರ್ಥೀವ ಶರೀರವನ್ನು ಇರಿಸಿದ ಬಳಿಕ ಸೇನೆಯ ಯೋಧರು ಅನೂಪ್ ಪೂಜಾರಿ ಅವರ ಗೌರವಾರ್ಥವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡನ್ನು ಹಾರಿಸಿದರು. ಸೈನ್ಯದ ಅಧಿಕಾರಿಗಳಾದ ಗುರುಂಧರ್ ಸಿಂಗ್, ಶಂಕರ್ ಗೌಡ ಪಾಟೀಲ್, ಆಚಿಜನೇಯ ಪಾಟೀಲ್ ಹಳಿಯಾಳ, ಸಂತೋಷ್ ಎಚ್. ಪಿ ಮಡಿಕೇರಿ, ಪ್ರದೀಪ್ ಮಳವಳ್ಳಿ ಹುಬ್ಬಳ್ಳಿ ಹಾಗೂ ಉಡುಪಿ ಎನ್ ಸಿ ಸಿ ಘಟಕದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜ ಹಸ್ತಾಂತರ:
ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರ ಧ್ವಜವನ್ನು ಅನೂಪ್ ಪೂಜಾರಿಯವರ ಪತ್ನಿ ಮಂಜುಶ್ರೀ ಅವರಿಗೆ ಹಸ್ತಾಂತರಿಸಲಾಯಿತು. ಮೃತದೇಹದ ಅಗ್ನಿ ಸ್ಪರ್ಶದ ವೇಳೆ ಜಮಾಯಿಸಿದ್ದ ಜನರು ಅಂತಿಮ ದರ್ಶನ ಪಡೆಯಲು ಗೂಡ್ಸ್ ವಾಹನ ಹಾಗೂ ಮರಗಳನ್ನು ಏರಿದ ಪ್ರಸಂಗವೂ ನಡೆಯಿತು.
ನನ್ನ ಗೊಂಬೆ..ಏನಾಯ್ತು ಮಗನೇ..”!
ಹುತಾತ್ಮ ಯೋಧ ಅನೂಪ್ ಅವರ ಪಾರ್ಥೀವ ಶರೀರ ಮನೆಗೆ ಬರುತ್ತಿದ್ದಂತೆ ಪತ್ನಿ, ತಾಯಿ ಹಾಗೂ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹದ ಅಗ್ನಿ ಸ್ಪರ್ಶ ಮಾಡುವ ಮೊದಲು ಅಂತಿಮ ದರ್ಶನ ಪಡೆಯುವ ವೇಳೆ ತಾಯಿ ಚಂದು ಪೂಜಾರ್ತಿ “ನನ್ನ ಗೊಂಬೆ..ಏನಾಯ್ತು ಮಗನೇ..”! ಎಂದು ಕಣ್ಣೀರು ಸುರಿಸುತ್ತ ಬಂದ ದೃಶ್ಯ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಬಿಲ್ಲವ ಸಮುದಾಯದ ಸಂಪ್ರದಾಯದಂತೆ ಅನೂಪ್ ಅವರ ದೊಡ್ಡಮ್ಮನ ಮಕ್ಕಳಾದ ಶಿವರಾಮ್ ಅಮಿನ್ ಹಾಗೂ ತಿಲಕ್ ಅಮಿನ್ ಅಂತಿಮ ವಿಧಿಗಳನ್ನು ಪೂರೈಸಿದರು. ಬೀಜಾಡಿಯ ಸಮುದ್ರತೀರದಲ್ಲಿ ಚಿತೆಯ ಮೇಲೆ ಇರಿಸಿದ ಪಾರ್ಥೀವ ಶರೀರಕ್ಕೆ ಶಿವರಾಮ್ ಅಮಿನ್ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಅನೂಪ್ ಪೂಜಾರಿ ಅಮರ್ ರಹೇ.. ಭಾರತ್ ಮಾತಾಜಿ ಜೈ.. ಎನ್ನುವ ಉದ್ಘೋಷಣೆಯನ್ನು ಮಾಡಿದರು.
ಕಳೆದ 13 ವರ್ಷಗಳ ಹಿಂದೆ ದೇಶಸೇವೆಯ ಕನಸುಗಳೊಂದಿಗೆ ಭಾರತೀಯ ಸೇನೆಗೆ ಸೇರಿದ್ದ ಅನೂಪ್, ಮರಾಠ ರೆಜಿಮೆಂಟ್‌ನಲ್ಲಿ ಲೈಟ್ ಇನ್ಫೆಂಟ್ರಿ ಬಟಾಲಿಯನ್‌ಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹವಾಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಇನ್ನೂ ಮೂರು ತಿಂಗಳ ಬಳಿಕ ಕರ್ತವ್ಯಕ್ಕಾಗಿ ಗುಜರಾತ್‌ನಲ್ಲಿ ವರದಿ ಮಾಡಿಕೊಳ್ಳಬೇಕಾಗಿತ್ತು. ಪೆರ್ಡೂರಿನ ಮಂಜುಶ್ರೀ ಅವರನ್ನು ವಿವಾಹವಾಗಿದ್ದ ಅವರಿಗೆ ಎರಡು ವರ್ಷದ ಇಶಾನಿ ಎನ್ನುವ ಹೆಣ್ಣು ಮಗು ಇದೆ. ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ತುಂಬು ಕುಟುಂಬ ಹೊಂದಿರುವ ಅನೂಪ್ ಸೇನೆಯಲ್ಲಿ ಶಾರ್ಟ್ ಟರ್ಮ್ ಸೇವೆಯನ್ನು ಮುಗಿಸಿ ಊರಿನಲ್ಲಿ ಬೇರೆ ಉದ್ಯೋಗದೊಂದಿಗೆ ನೆಲೆಯಾಗುವ ಕುರಿತು ಚಿಂತನೆ ನಡೆಸಿದ್ದರು ಎಂದು ಅವರ ಗೆಳೆಯರು ನೆನಪಿಸಿಕೊಳ್ಳುತ್ತಿದ್ದಾರೆ.
ಫೋನ್ ಬಾರದೇ ಇದ್ದಾಗ ಆತಂಕವಾಯಿತು:
ಮದುವೆಯಾದ ಬಳಿಕ ಹಿಮಾಚಲ ಪ್ರದೇಶದಲ್ಲಿ ನಾವು ಜೊತೆಯಾಗಿಯೇ ಇದ್ದೆವು. ಜಮ್ಮು-ಕಾಶ್ಮೀರದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರದ ಗಡಿಭಾಗವಾದ ಪೂಂಚ್ ಆಟ್ಯಾಕ್ ಆದ ಬಳಿಕ ಅಲ್ಲಿಗೆ ನೇಮಕಾತಿ ಮಾಡಲಾಗಿತ್ತು. ಇನ್ನು ಆರು ತಿಂಗಳಲ್ಲಿ ಗುಜರಾತ್ ಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕಿತ್ತು. ಪ್ರತೀ ದಿನ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ ಅನೂಪ್ ಅವರಿಂದ ಮಂಗಳವಾರ ಪೋನ್ ಬಾರದೇ ಇದ್ದಾಗಲೇ ಆತಂಕ ಶುರುವಾಗಿತ್ತು. ಕಾಶ್ಮೀರದಲ್ಲಿಯ ಘಟನೆಯ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದ ಹೊತ್ತಿಗೆ ಅನೂಪ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ಮಿಲಿಟರಿ ವಾಹನ ಅಪಘಾತವಾಗಿರುವ ಮಾಹಿತಿ ಗೊತ್ತಾದ ಬಳಿಕ ಆತಂಕ ಇನ್ನೂ ಹೆಚ್ಚಾಯಿತು. ದಿನಪೂರ್ತಿ ಪತಿಯ ಕರೆಗಾಗಿ ಕಾದಿದ್ದ ನನಗೆ ಬುಧವಾರ ಬೆಳಿಗ್ಗೆ ದುರ್ಘಟನೆಯ ಮಾಹಿತಿ ದೊರಕಿದೆ ಎಂದು ಪತ್ನಿ ಮಂಜುಶ್ರೀ ಕಣ್ಣೀರಿಟ್ಟರು.
ಡಿವೈಎಸ್ಪಿ ಕೆಯು. ಬೆಳ್ಳಿಯಪ್ಪ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಪ್ರಭಾರ ಪೊಲೀಸ್ ನಿರೀಕ್ಷಕ ಜಯರಾಮ್ ಗೌಡ, ಉಪನಿರೀಕ್ಷಕರಾದ ನಂಜಾ ನಾಯ್ಕ್, ಪ್ರಸಾದ್, ಸುಧಾ ಪ್ರಭು ಮುಂತಾದವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
“ನನ್ನ ತಮ್ಮನ ಹೆಂಡತಿಗೆ ನ್ಯಾಯ ಕೊಡಿಸಿ. ಅವಳಿಗೆ ಚಿಕ್ಕ ಮಗುವಿದೆ. ನಮ್ಮ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. ದೊಡ್ಡಮ್ಮನ ಮನೆಯಲ್ಲೇ ಬೆಳೆದವರು ನಾವು. ಅಕ್ಕಂದಿರ ಮದುವೆಯನ್ನು ಮಾಡಿಸಿದ್ದ ಆತ ಜೀವನದಲ್ಲಿ ಸುಖವನ್ನೇ ನೋಡಿಲ್ಲ. ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿರುವ ನನ್ನಮ್ಮನನ್ನು ನೋಡಿಕೊಳ್ಳುವವರು ಯಾರು. ದಯವಿಟ್ಟು ಸರ್ಕಾರದವರು ನನ್ನ ನಾದಿನಿಗೊಂದು ಕೆಲಸ ನೀಡಲಿ.”
-ಶಾರದಾ, ಅನೂಪ್ ಸಹೋದರಿ
“ಇಡೀ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದ ಅನೂಪ್ ಸಾವಿನಿಂದಾಗಿ ಕುಟುಂಬದ ಆಧಾರ ಸ್ಥಂಭವೇ ಕುಸಿದು ಬಿದ್ದಿದೆ. ಪತ್ನಿ, ಪುತ್ರಿ ಮತ್ತು ತಾಯಿಯ ಕಾಳಜಿಯ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಂಭೀರ ಚಿಂತನೆ ನಡೆಸಬೇಕು.”