ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ : ಆಹ್ವಾನ ಪತ್ರಿಕೆ ಬಿಡುಗಡೆ
ಕೋಟ: ಕರಾವಳಿಯ ಉಡುಪಿ ಮತ್ತು ದಕ್ಷಿಣಕನ್ನಡ ಅವಳಿ ಜಿಲ್ಲೆಗಳ 8 ತಾಲೂಕಿನ 13 ವಿಧಾನ ಸಭಾ ಕ್ಷೇತ್ರದ 400 ಕ್ಕೂ ಮಿಕ್ಕಿ ಪಂಚಾಯತ್ ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಭಾಗವಹಿಸುವಿಕೆಯ ಕ್ರೀಡಾಕೂಟ ಸಪ್ಟೆಂಬರ್ 25 ರಂದು ಭಾನುವಾರ ಉಡುಪಿ ತಾಲೂಕಿನ ಕೋಟದ ರಾಷ್ಟ್ರೀಯ ಹೆದ್ದಾರಿ 66 ರ ಅಂಚಿನಲ್ಲಿರುವ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಅಪರೂಪದ ಕ್ರೀಡೋತ್ಸವದ ಆಹ್ವಾನ ಪತ್ರಿಕೆಯನ್ನು ಕೋಟ ಡಾ. ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ್ ಬಾಬು ರವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಕ್ರೀಡಾಕೂಟವನ್ನು “ಹೊಳಪು-2016” ಪರಿಚಯದ ಪರಿಭಾಷೆ ಎಂದು ನಾಮಾಂಕಿತಗೊಳಿಸಲಾಗಿದ್ದು, ಸದರಿ ಕ್ರೀಡಾಕೂಟದಲ್ಲಿ 3000 ಕ್ಕೂ ಮಿಕ್ಕಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೋಟತಟ್ಟು ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ದಿನಕರ್ ಬಾಬುರವರು ಭರವಸೆ ವ್ಯಕ್ತಪಡಿಸಿದರು.
ಕ್ರೀಡಾಕೂಟಕ್ಕೆ ಪೂರ್ವಾಹ್ನ 8.00 ಗಂಟೆಗೆ ಕ್ರೀಡಾಜ್ಯೋತಿಯ ಮೆರವಣಿಗೆಯೊಂದಿಗೆ ಚಾಲನೆ ದೊರಕಲಿದ್ದು, ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಎಚ್.ಕೆ. ಪಾಟೀಲ್‍ರವರು ಬೆಳಿಗ್ಗೆ ಗಂಟೆ 9.00 ಕ್ಕೆ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಪೌರಾಡಳಿತ ಸಚಿವರಾದ ಶ್ರೀ ಈಶ್ವರ್ ಖಂಡ್ರೆಯವರು, ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರು, ಎಲ್ಲಾ ಜನಪ್ರತಿನಿಧಿಗಳು, ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು,ಇದೊಂದು ಅಭೂತಪೂರ್ವ ಕ್ರೀಡೋತ್ಸವದ ಕಾರ್ಯಕ್ರಮವಾಗಿದೆ ಎಂದುಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷರಾದ ಆನಂದ ಕುಂದರ್‍ರವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಸ್ಥಳೀಯಾಡಳಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಗೆ ಒತ್ತು ನೀಡಲು ಕೋಟತಟ್ಟು ಗ್ರಾಮ ಪಂಚಾಯತ್ ವಿನಂತಿಸಿಕೊಂಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕಾಂಚನ್ ಹಾಗೂ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಣಿ ಅಡಿಗ, ಉಪಾಧ್ಯಕ್ಷರಾದ ಮಹಾಬಲೇಶ್ವರ ಆಚಾರ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವನಿತಾ ಶ್ರೀಧರ ಆಚಾರ್ಯ, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ಜಿ. ಪುತ್ರನ್, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಹಾಗೂ ರವೀಂದ್ರ ದೊಡ್ಮನೆ, ಅಲ್ತಾರು ಗೌತಮ್ ಹೆಗ್ಡೆ, ಪ್ರವೀಣ್ ಕುಮಾರ್ ಶೆಟ್ಟಿ, ಸಂಜೀವ ದೇವಾಡಿಗ, ಕೆ.ಕೆ. ನಾಯ್ಕ್, ಬಾರ್ಕೂರು, ಭೋಜ ಹೆಗ್ಡೆ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‍ಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.