ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Spread the love

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು:  ನಗರದ ಪಂಪ್‌ವೆಲ್‌ನ ಮೇಲ್ಸೇತುವೆ ಕಾಮಗಾರಿಯ ವಿಳಂಬ ಖಂಡಿಸಿ ಮಂಗಳೂರು ನಗರ ಮತ್ತು ಮಂಗಳೂರು ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಪಂಪ್‌ವೆಲ್‌ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ ಆರ್ ಲೋಬೊ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಎಲ್ಲಿಯಾದರು ಚಿಕ್ಕ ರಿಪೇರಿ ಕೆಲಸ ಬಾಕಿ ಇದ್ದರೂ ಸಂಸದ ನಳೀನ್ ಮತ್ತು ಬಿಜೆಪಿಗರು ಪ್ರತಿಭಟನೆ ಮಾಡಿ ರಾಜ್ಯ ಸರಕಾರ ಮತ್ತು ಪಾಲಿಕೆಯ ವಿರುದ್ದ ಘೋಷಣಗಳನ್ನು ಕೂಗುತ್ತಿದ್ದರು. ಆದರೆ ಅದೇ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ 8 ವರ್ಷಗಳಿಂದ ಪಂಪ್ ವೆಲ್ ಸರ್ಕಲಿನ ಫ್ಲೈ ಒವರ್ ಕೆಲಸವನ್ನು ಮುಗಿಸುವಲ್ಲಿ ಅಸಮರ್ಥರಾಗಿದ್ದಾರೆ. 10 ವರ್ಷಗಳ ಹಿಂದೆ ಯುಪಿಎ ಸರಕಾರ ಇದಕ್ಕೆ ಹಣವನ್ನು ಮಂಜೂರು ಮಾಡಿತ್ತು ಆದರೆ ಕಳೆದ 5 ವರ್ಷಗಳಿಂದ ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ ಅದನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಅಂತಹ ಸಂಸದರು ನಮಗೆ ಅಗತ್ಯವೇ ಎಂದರು ಪ್ರಶ್ನಿಸಿದರು.

ಕಳೆದ 10 ವರ್ಷಗಳಿಂದ ನಳಿನ್ ಕುಮಾರ್ ಕಟೀಲ್ ದಕ ಜಿಲ್ಲೆಯ ಸಂಸದರಾಗಿ ಅವರ ಕೊಡುಗೆ ಶೂನ್ಯ. ಜಿಲ್ಲೆಯ ಅಭಿವದ್ದಿಗೆ ಅವರ ನೀಡದ ಅನುದಾನ ಕೂಡ ಶೂನ್ಯ. ಪಂಪ್ ವೆಲ್ ಸರ್ಕಲಿನ ಫ್ಲೈ ಒವರ್ ಕೆಲಸ ಪೂರ್ಣಗೊಳ್ಳದೆ ಇರಲು ಕಾರಣ ಅಧಿಕಾರಿಗಳು ಅವರ ಮಾತನ್ನು ಕೇಳದೆ ಇರುವುದು. ಕೇವಲ ಒಂದು ಫ್ಲೈಒವರಿನ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಸಂಸದ ಜಿಲ್ಲೆಯ ಅಭಿವೃದ್ಧಿಯನ್ನು ಮಾಡಲು ಹೇಗೆ ಸಾಧ್ಯ?.

ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಾಗಾರಿ ಮಾಡುವಾಗ ಮೊದಲು ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಬೇಕು ಆದರೆ ಬಿಕರ್ನಕಟ್ಟೆ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಾಡಲು ಕೂಡ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಂತೂರಿನಲ್ಲಿ ಈ ವರೆಗೆ ಹಲವಾರು ಜೀವಗಳು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಯಾವುದೇ ರಾಷ್ಟ್ರೀಯ ಹೆದ್ದಾರಿ ಕೂಡ ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣಗೊಂಡಿದಲ್ಲ ಎಂದರು.

ದೇಶದ ವಿವಿಧ ಕಡೆಗಳಲ್ಲಿ ಪ್ಲೈಓವರ್ ಕಾಮಗಾರಿಗಳು ಒಂದು-ಒಂದೂವರೆ ವರ್ಷದೊಳಗೆ ಮುಕ್ತಾಯವಾಗುತ್ತದೆ. ಆದರೆ ಪಂಪ್‌ವೆಲ್‌ನ ಈ ಕಾಮಗಾರಿಯನ್ನು ಆರಂಭಿಸಿ ಎಂಟು ವರ್ಷವಾದರೂ ಮುಕ್ತಾಯವಾಗಿಲ್ಲ. ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಈ ಕ್ಷೇತ್ರದ ಸಂಸದರು ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ಆದರೆ ಅವರು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭ ಪ್ರತಿಭಟನಾಕಾರರು ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಾಜಿ ಮೇಯರ್ ಮಹಾಬಲ ಮಾರ್ಲ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮತ್ತಿತರರು ಪಾಲ್ಗೊಂಡಿದ್ದರು.


Spread the love