Home Mangalorean News Kannada News ಪಚ್ಚನಾಡಿ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿ: ಎನ್‌ಎಸ್‌ಯುಐ ಘಟಕದಿಂದ ಸಿಎಂಗೆ ದೂರು

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿ: ಎನ್‌ಎಸ್‌ಯುಐ ಘಟಕದಿಂದ ಸಿಎಂಗೆ ದೂರು

Spread the love

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿ: ಎನ್‌ಎಸ್‌ಯುಐ ಘಟಕದಿಂದ ಸಿಎಂಗೆ ದೂರು

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾಮಂಜೂರು ಸಮೀಪದ ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸುತ್ತಮುತ್ತಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ, ಸ್ಪೀಕರ್ ಮತ್ತಿತರರಿಗೆ ಎನ್‌ಎಸ್‌ಯುಐ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ಮನವಿ ಸಲ್ಲಿಸಿದ್ದಾರೆ.

ಈ ಪ್ರದೇಶದ ಸುತ್ತಮುತ್ತ ಅನೇಕ ಶಾಲಾ ಕಾಲೇಜುಗಳಿವೆ. ಈ ವಿದ್ಯಾರ್ಥಿಗಳು ನಿತ್ಯ 8 ಗಂಟೆಗೂ ಹೆಚ್ಚು ಹೊತ್ತು ತರಗತಿ ಯಲ್ಲಿ ಕುಳಿತು ದುರ್ವಾಸನೆಯಿಂದ ಪರಿತಪಿಸುವಂತಾಗಿದೆ. ಹಾನಿಕಾರಕ ಅನಿಲಗಳು, ಮೈಕ್ರೋ ಪ್ಲಾಸ್ಟಿಕ್ ಮತ್ತು ಧೂಳು ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೊಡೆತ ನೀಡುತ್ತಿವೆ.ಅನೇಕ ವಿದ್ಯಾರ್ಥಿಗಳು ಉಸಿರಾಟದ ತೊಂದರೆ ಹಾಗೂ ಬಗೆಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎದೆ ನೋವು ಮತ್ತು ಇತರ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಖಂಡನೀಯ. ಜನವಸತಿ ಪ್ರದೇಶದಿಂದ ಈ ಡಂಪಿಂಗ್ ಯಾರ್ಡನ್ನು ನಗರದ ಹೊರಭಾಗಕ್ಜೆ ಸ್ಥಳಾಂತರಿಸುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಇದೀಗ ಹವಾಮಾನದ ವೈಪರೀತ್ಯದಿಂದಾಗಿ ಬಿಸಿಲಿನ ಝಳ ಹೆಚ್ಚಾಗಿದೆ. ಈ ಸಂದರ್ಭ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂಭವವೂ ಇದೆ. ಹಾನಿಕಾರಕ ರಾಸಾಯನಿಕ ಅನಿಲಗಳ ಈ ಹೊರಸೂಸುವಿಕೆಯು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಲ್ಲದು. ಅದರಲ್ಲೂ ಸಮೀಪದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.


Spread the love

Exit mobile version