ಪಟ್ಲ ಫೌಂಡೇಷನ್ ದೆಹಲಿ ಘಟಕಕ್ಕೆ ಚಾಲನೆ

Spread the love

ಪಟ್ಲ ಫೌಂಡೇಷನ್ ದೆಹಲಿ ಘಟಕಕ್ಕೆ ಚಾಲನೆ

ನವದೆಹಲಿ: ಏಕತಾನತೆಯಿಂದ ಜನಪ್ರಿಯತೆ ಕಳೆದುಕೊಳ್ಳುತ್ತಿದ್ದ ಯಕ್ಷಗಾನಕ್ಕೆ ಮರುಜೀವ ನೀಡಿದ್ದು ತೆಂಕು ತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ. ಯಕ್ಷಗಾನದ ಹಾಡುಗಾರಿಕೆಗೆ ವಿಸ್ತಾರ ತಂದುಕೊಟ್ಟಿದ್ದರಿಂದ ಈಗ ರಂಗ ನಟರು ಕೂಡ ಅಗತ್ಯಕ್ಕೆ ತಕ್ಕಂತೆ ತಮ್ಮ ಕುಣಿತವನ್ನೂ ವಿಸ್ತಾರಗೊಳಿಸುತ್ತಿದ್ದಾರೆ ಎಂದು ಜಾನಪದ ವಿದ್ವಾಂಸ, ಜೆಎನ್‍ಯು ಕನ್ನಡ ಪೀಠದ ಪುರುಷೋತ್ತಮ ಬಿಳಿಮಲೆ ಹೇಳಿದರು.

ನವದೆಹಲಿಯ ಕರ್ನಾಟಕ ಸಂಘದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಷನ್‍ನ ದೆಹಲಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕ ಭಾಷಣ ಮಾಡಿದ ಅವರು, 50ರ ದಶಕದಲ್ಲಿ ಯಕ್ಷಗಾನಕ್ಕೆ ಭದ್ರತೆ, ಮನ್ನಣೆ ಇರಲಿಲ್ಲ. 60ರ ದಶಕದಲ್ಲಿ ವಿದ್ವಾಂಸರ ಪ್ರವೇಶದಿಂದಾಗಿ ಯಕ್ಷಗಾನ ಔನ್ಯತ್ಯಕ್ಕೆ ಸಾಗಿತು. ಆದರೆ 70ರ ದಶಕದಲ್ಲಿ ಯಕ್ಷಗಾನ ಜನಪ್ರಿಯತೆ ಕಳೆದುಕೊಂಡಾಗ, ತುಳು ಯಕ್ಷಗಾನಗಳು ಇದಕ್ಕೆ ಮರುಜೀವ ತುಂಬಿದವು. ಆದರೆ 80-90ರ ದಶಕದ ನಂತರ ಏಕತಾನತೆಯಿಂದಾಗಿ ಕುಸಿತ ಕಂಡ ಯಕ್ಷಗಾನಕ್ಕೆ ಈಗ ಪಟ್ಲ ಹೊಸ ರೂಪ ನೀಡಿದ್ದಾರೆ. ಆಧುನಿಕ ತಂತ್ರಜ್ಞಾನಗಳ ಸೂಕ್ತ ಬಳಕೆಯೂ ಅವರಿಂದ ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಮಾಜಿ ಸಚಿವ, ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್, “ಸ್ವಾತಂತ್ರೃಪೂರ್ವದಲ್ಲಿ ನನ್ನ ತಂದೆಯೊಂದಿಗೆ ಉಡುಪಿಯಿಂದ ಕುಂದಾಪುರಕ್ಕೆ ಏಳೆಂಟು ಕಿ.ಮೀ. ದೂರ ನಡೆದು, ನದಿ ದಾಟಿ ಯಕ್ಷಗಾನ ನೋಡಲು ಹೋಗುತ್ತಿದ್ದೆ. ಎಳವೆಯಲ್ಲಿಯೇ ತಂದೆ ಪುರಾಣ ಕಥೆಗಳನ್ನು ಹೇಳುತ್ತಿದ್ದರಿಂದ ಯಕ್ಷಗಾನದ ಮೇಲೆ ವಿಶೇಷ ಆಸಕ್ತಿ ಹುಟ್ಟಿಕೊಂಡಿತು. ಪಟ್ಲರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಅವರ ಪಟ್ಲ ಫೌಂಡೇಷನ್ ಘಟಕ ದೆಹಲಿಯಲ್ಲಿ ತೆರೆದಿರುವುದು ಖುಷಿ ತಂದಿದೆ ಎಂದರು.

ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎನ್. ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಫೌಂಡೇಷನ್ ಸಾಧನೆ ಮೆಚ್ಚಿಕೊಂಡು 1 ಲಕ್ಷ ರೂ ದೇಣಿಗೆ ನೀಡುವುದಾಗಿ ಅವರು ಘೋಷಿಸಿದರು.

patla-foundation-delhi-00 patla-foundation-delhi-01 patla-foundation-delhi-02 patla-foundation-delhi-03 patla-foundation-delhi-04 patla-foundation-delhi-05 patla-foundation-delhi-06 patla-foundation-delhi-07

ದೆಹಲಿಗೆ ಬಂದು 47 ವರ್ಷಗಳಾಗಿದ್ದರೂ, ಯಕ್ಷಗಾನದ ಮೇಲಿನ ಪ್ರೀತಿ ಮಾಸಿಲ್ಲ. ಚೆಂಡೆ ಶಬ್ದ ಕೇಳಿದಾಗ ಮೈ ನವಿರೇಳುತ್ತದೆ. ಚಿಕ್ಕಂದಿನಲ್ಲಿ ಚೆಂಡೆ ಬಾರಿಸಬೇಕೆಂದು ಭಾರೀ ಹಂಬಲವಿತ್ತು. ಚೆಂಡೆ ಬಾರಿಸಿ ಕಾರ್ಯಕ್ರಮವನ್ನು ಆಸ್ಕರ್ ಅವರು ಉದ್ಘಾಟಿಸಿದಾಗ ನನಗೂ ಚೆಂಡೆ ಬಾರಿಸಲು ಅವಕಾಶ ಕೊಟ್ಟಾರಾ ಎಂದುಕೊಂಡಿದ್ದೆ. ಕಾರ್ಯಕ್ರಮದ ನಿರೂಪಕರು ನನ್ನನ್ನೂ ಚಂಡೆ ಬಾರಿಸುವಂತೆ ಕೇಳಿಕೊಂಡದ್ದರಿಂದ ಖುಷಿಯಿಂದಲೇ ಬಾರಿಸಿದೆ ಎಂದು ಕೆ.ಎನ್. ಭಟ್ ಸಂತಸ ಹಂಚಿಕೊಂಡರು.

ಇದೇ ವೇಳೆ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತು ಭಾಗವತ ಸುರೇಶ್ ಶೆಟ್ಟಿ ಅವರಿಗೆ ಪಟ್ಲ ಫೌಂಡೇಷನ್ ದೆಹಲಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಪಟ್ಲ ಫೌಂಡೇಷನ್‍ನ ಕೇಂದ್ರ ಸಮಿತಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಪೆರ್ಮುದೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸಭೆಯಲ್ಲಿ ಉಪಸ್ಥಿತರಿದ್ದರು. ದೆಹಲಿ ಘಟಕದ ಗೌರವ ಸಲಹೆಗಾರ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ದೆಹಲಿ ಘಟಕದ ಸಂಚಾಲಕ ಕಾರ್ತಿಕ್ ರೈ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರ್ವಹಿಸಿದರು. ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್ ಸಹಕರಿಸಿದರು.

ಮನಸೂರೆಗೊಂಡ ಯಕ್ಷನಾಟ್ಯ ವೈಭವ ದೆಹಲಿಯಲ್ಲಿ ಮೊದಲ ಬಾರಿಗೆ ತೆಂಕು ಮತ್ತು ಬಡಗುತಿಟ್ಟಿನ ಕಲಾವಿದರ ಕೂಡುವಿಕೆಯಿಂದ ಹೊರಬಂದ ಯಕ್ಷಗಾನ ನಾಟ್ಯ ವೈಭವ ದೆಹಲಿ ಕನ್ನಡಿಗರು ಹಾಗೂ ಕನ್ನಡೇತರರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. ನಿರೀಕ್ಷೆಗೂ ಮೀರಿದ ಸಂಖ್ಯೆಯ ಯಕ್ಷಾಭಿಮಾನಿಗಳಿಂದ ಕಿಕ್ಕಿರಿದಿದ್ದ ಕರ್ನಾಟಕ ಸಂಘ ಅಪೂರ್ವ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ರಕ್ಷಿತ್ ಶೆಟ್ಟಿ ಪಡ್ರೆ ಮತ್ತು ವಿಶ್ವನಾಥ ಹೆಣ್ಣಬೈಲ್ ಅವರ ಕೃಷ್ಣ-ಅಸೀಕೆ ಪ್ರೇಮ ಸಲ್ಲಾಪ, ದಿಶಾ ಶೆಟ್ಟಿ-ವರ್ಷಾ ಶೆಟ್ಟಿ ಅವರ ರಾಧಾ ವಿಲಾಸ, ಲೋಕೇಶ್ ಮುಚ್ಚೂರು ಮತ್ತು ಸಂದೇಶ್ ಮಂದಾರ ನಡೆಸಿಕೊಟ್ಟ ಕೃಷ್ಣ ವಿಜಯ, ಶಕಟಾಸುರನಾಗಿ ಹರಿನಾರಾಯಣ ಎಡನೀರು, ದೇನುಕಾಸುರನಾಗಿ ರಾಹುಲ್ ಶೆಟ್ಟಿ ಕುಡ್ಲ, ವಿಶ್ವನಾಥ ಹೆಣ್ಣಬೈಲ್ ಅವರ ವೀರರಸ, ಮಾನಿಷಾದ ಪ್ರಸಂಗದ ರೂP್ಷÀ ಮತ್ತು ಸೈರಿಣಿ ಪ್ರೇಮ ಪ್ರಸಂಗಗಳ ಪ್ರಸ್ತುತಿ ನೋಡುಗರನ್ನು ಸೆರೆ ಹಿಡಿದುಕೊಂಡಿದ್ದವು. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಸುರೇಶ ಶೆಟ್ಟಿ, ಸುಬ್ರಹ್ಮಣ್ಯ ಭಟ್ ದೇಲಂತಮಜಲು, ವಿನಯ ಆಚಾರ್ಯ ಕಡಬ, ಶಶಿಕುಮಾರ್ ಆಚಾರ್ಯ, ರಜನೀಶ್ ಭಟ್ ಸಹಕರಿಸಿದರು.


Spread the love