Home Mangalorean News Kannada News ಪಡಿತರ ಚೀಟಿ ವಿವರ ಗ್ರಾಮಲೆಕ್ಕಿಗರಿಂದ ಪರಿಶೀಲನೆ : ಯು.ಟಿ. ಖಾದರ್

ಪಡಿತರ ಚೀಟಿ ವಿವರ ಗ್ರಾಮಲೆಕ್ಕಿಗರಿಂದ ಪರಿಶೀಲನೆ : ಯು.ಟಿ. ಖಾದರ್

Spread the love

ಪಡಿತರ ಚೀಟಿ ವಿವರ ಗ್ರಾಮಲೆಕ್ಕಿಗರಿಂದ ಪರಿಶೀಲನೆ : ಯು.ಟಿ. ಖಾದರ್

ಮ0ಗಳೂರು : ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿಗಳನ್ನು ಗ್ರಾಮಲೆಕ್ಕಿಗರಿಂದ ಪರಿಶೀಲಿಸಿ ಬಳಿಕ ಹೊಸ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರ ಪ್ರಶ್ನೆಗೆ ಉತ್ತರ ನೀಡಿರುವ ಆಹಾರ ಸಚಿವರು, ಪ್ರಸ್ತುತ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ಸಹಯೋಗದೊಂದಿಗೆ ಅರ್ಜಿದಾರರ ಮಾಹಿತಿಯನ್ನು ತಂತ್ರಾಶದ ಮೂಲಕ ಕಂದಾಯ ಇಲಾಖೆಗೆ ಕಳುಹಿಸಿ ಲಭ್ಯ ಮಾಹಿತಿ ಆಧಾರದ ಮೇಲೆ ಅರ್ಜಿದಾರರ ಆದಾಯ ಮತ್ತು ಇನ್ನಿತರ ವಿವರಗಳನ್ನು ಗ್ರಾಮ ಲೆಕ್ಕಿಗೆ ಮುಖಾಂತರ ಪರಿಶೀಲಿಸಿ, ಆ ವಿವರವನ್ನು ಆಹಾರ ಇಲಾಖೆಯ ತಂತ್ರಾಂಶಕ್ಕೆ ಕಳುಹಿಸುವಂತೆ ಆದೇಶಿಸಲಾಗಿದೆ. ಅದನ್ನು ಆಧರಿಸಿ ಹೊಸ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಇದನ್ನು ಪ್ರಾಯೋಗಿಕವಾಗಿ ಕಾರವಾರ ತಾಲೂಕಿನಲ್ಲಿ ಜಾರಿಗೊಳಿಸಲಾಗಿದ್ದು, ಅದರ ಸಾಧಕ-ಬಾಧಕಗಳನ್ನು ಆಧರಿಸಿ, ರಾಜ್ಯದ ಇತರ ಭಾಗಗಳಿಗೂ ಅಳವಡಿಸಿ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ನೂತನ ಪಡಿತರ ಚೀಟಿ ಕೋರಿ ನಗರ ಪ್ರದೇಶಗಳಲ್ಲಿ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ, ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಆಹಾರ ಇಲಾಖೆಯಿಂದ ಗುರುತಿಸಲ್ಪಟ್ಟ ಖಾಸಗಿ ಸೇವಾಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸಚಿವರು ತಿಳಿಸಿದರು.

ಸರ್ಕಾರವು ನೈಜವಾದ ಫಲಾನುಭವಿಗಳಿಗೆ ಪಡಿತರ ಚೀಟಿ ದೊರಕುವಂತೆ ಅವಕಾಶ ಕಲ್ಪಿಸಲು ಪರಿಷ್ಕøತ ಮನದಂಡಗಳನ್ನು ತರಲಾಗಿದೆ. ನಾಲ್ಕು ಮಾನದಂಡಗಳನ್ನು ಬಿಪಿಎಲ್ ಪಡಿತರ ಚೀಟಿಗೆ ಹೊರತುಪಡಿಸಲಾಗಿದೆ; (1) ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು (2) ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. (3) ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ, ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲ ಕುಟುಂಬಗಳು.(4) ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಕ್ಕಿಂತಲೂ ಹೆಚ್ಚು ಇರುವ ಕುಟುಂಬಗಳು.

ಈ ನಾಲ್ಕು ಆದ್ಯತೇತರ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹ ಕುಟುಂಬವೆಂದು ಪರಿಗಣಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.


Spread the love

Exit mobile version