ಪಡುಬಿದ್ರಿ: “ಸರಕಾರದ ಯಾವುದೇ ಭರವಸೆ ಈಡೇರಿಸಿಲ್ಲ. ನಾವು ಅತಂತ್ರ ಸ್ಥಿತಿಯಲ್ಲಿ ಜೀವಿಸುತ್ತಿದ್ದೇವೆ. ನಾವೂ ಮನುಷ್ಯರು. ನಮ್ಮನ್ನು ಬದುಕಲು ಬಿಡಿ” ಪಡುಬಿದ್ರಿಯ ಸುಜ್ಲಾನ್ ಕಾಲನಿ ಬಳಿ ವಾಸಿಸುತ್ತಿರುವ 18 ಕೊರಗ ಕುಟುಂಬಗಳ ಮನದಾಳದ ಮಾತಿದು.
ಪತ್ರಕರ್ತರೊಂದಿಗೆ ಕೊರಗ ಕಾಲನಿಯ ಶ್ರೀಮತಿ ಮಾತನಾಡಿ, ನಾಳೆ ನಮಗೆ ಏನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ಜಿಲ್ಲಾಡಳಿತೇ ಹೊಣೆ. ನಮ್ಮ ಸಮಸ್ಯೆ ಶೀಘ್ರ ಪರಿಹರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲೇ ಮೊಕ್ಕಾಂ ಹೂಡುವುದಾಗಿ ಅವರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇರೆ ಬೇರೆ ಕಡೆ ವಾಸ್ತವ್ಯವಿದ್ದ 18 ಕೊರಗ ಕುಟುಂಬಗಳು ಕಳೆದ ವರ್ಷ ಜುಲೈ 7 ರಂದು ಸುಜ್ಲಾನ್ ಕಾಲನಿ ಸಮೀಪದ ಖಾಲಿ ಜಾಗದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡಿದ್ದರು.
ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಾಗ ಹಲವು ಜನಸೇವಾ ಸಂಘಟನೆಗಳು, ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಆಗಮಿಸಿ ಭರವಸೆಗಳನ್ನು ನೀಡಿದ್ದಾರೆ. ಪಕ್ಕದಲ್ಲಿದ್ದ ಸುಜ್ಲಾನ್ ಕಂಪನಿಯ ಜಾಗದಲ್ಲಿ ಮನೆ ನಿವೇಶನ ಸಹಿತ ಮನೆ ನೀಡಲು ಸರಕಾರ ನಿರ್ಧರಿಸಿ, ಕಳೆದ ವರ್ಷ ವಾಲ್ಮೀಕಿ ಜಯಂತಿಯಂದು ಮನೆ ಮಂಜೂರಾತಿ ಪತ್ರವನ್ನು ನೀಡಿದೆ. ಆನಂತರ ಪಡುಬಿದ್ರಿ ಗ್ರಾ.ಪಂ. ಜಾಗದ ಡಿ.ನೋಟಿಫಿಕೇಶನ್ ಪತ್ರವನ್ನೂ ನೀಡಿತ್ತು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ಲಾಸ್ಟಿಕ್ ಹೊದೆದ ಮನೆಯೊಳಗೆ ಮಳೆ ನೀರು ಬಿದ್ದು, ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುವಂತಾಗಿದೆ. ಶೌಚಾಲಯ ವ್ಯವಸ್ಥೆ ಇಲ್ಲದೆ ಹಳೇ ಬಟ್ಟೆಗಳನ್ನು ಕೋಲಿಗೆ ಸುತ್ತ ಕಟ್ಟಿ ತಾತ್ಕಾಲಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಕಾಲನಿಗೆ ಹೋಗುವ ರಸ್ತೆಯಲ್ಲಿ ನೀರು ನಿಂತು ತೀವ್ರ ಸಮಸ್ಯೆಯಾಗಿದೆ. ಶಾಲಾ ಮಕ್ಕಳು ಶಾಲೆಗೆ ಹೋಗಲು ಭಯ ಪಡುತ್ತಿದ್ದಾರೆ. ವಿಷಕಾರಿ ಹಾವುಗಳಿಂದ ದಿನ ನಿತ್ಯ ಭಯಭೀತ ಜೀವನ ನಡೆಸುತ್ತಿದ್ದಾರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಅತ್ಯಂತ ಹೆಚ್ಚು ಕಷ್ಟ ಪಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಭರವಸೆಗಳ ಮಹಾಪೂರ ಹರಿಸಿದ್ದವರು ಈಗ ಎಲ್ಲಿ ಹೋಗಿದ್ದಾರೆ? ಎಂದು ಶ್ರೀಮತಿ ಪೃಶ್ನಿಸಿದ್ದಾರೆ.