ಪಡುಬಿದ್ರಿ ಸಮೀಪದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಮುಂಭಾಗ ನಿಲ್ಲಿಸಲಾಗಿದ್ದ ಸ್ವಿಫ್ಟ್ ಕಾರಿನ ಗ್ಲಾಸ್ ಒಡೆದು ರೂ.12,000/- ನಗದು ಇದ್ದ ಬ್ಯಾಗ್‍ನ್ನು ಎಗರಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪಿತ್ರೋಡಿ ಶಿವದಾಸ್ ಎಂಬವರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಂಬಂಧಿ ಎರ್ಮಾಳು ಚೇತನ್ ಸಾಲ್ಯಾನ್ ಎಂಬವರು ಕುಟುಂಬ ಸದಸ್ಯರ ಸಹಿತ ಉಚ್ಚಿಲ ಮಹಾಲಕ್ಷ್ಮೀ ದೇವಳಕ್ಕೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ್ದರು. ಪೂಜೆ ಮುಗಿಸಿ 2 ಗಂಟೆಗೆ ವಾಪಾಸು ಬಂದಾಗ ಕಾರಿನ ಎಡ ಬದಿಯ ಮುಂಭಾಗದ ಗ್ಲಾಸ್ ಒಡೆದಿತ್ತು. ಪರಿಶೀಲಿಸಿದಾಗ ನಗದು, ಚೆಕ್ ಹಾಗೂ ಬೀಗದ ಕೈಗಳಿದ್ದ ಬ್ಯಾಗ್ ಕಳವುವಾಗಿರುವುದು ಕಂಡು ಬಂದಿತ್ತು.
ದೇವಳದ ಸಿಸಿ ಟಿವಿ ಅಳವಡಿಸಲಾಗಿದ್ದು, ಘಟನೆ ಸಂದರ್ಭ ಬಂದ್ ಆಗಿತ್ತು. ದೇವಳದ ಮುಂಭಾಗ ಮರದಡಿ ಕಾರು ನಿಲ್ಲಿಸಿದ್ದು, ಮರದ ಗೆಲ್ಲುಗಳು ಎಡಭಾಗದಲ್ಲಿ ಕಾರಿಗೆ ಅಡ್ಡ ಇದ್ದ ಕಾರಣ ಕಳ್ಳರಿಗೆ ನೆರವಾಗಿತ್ತು.
ಇದೇ ರೀತಿಯ ಘಟನೆ ಉದ್ಯಾವರ ಹಲಿಮಾ ಸಾಬ್ಜು ಹಾಲ್‍ನಲ್ಲಿ ನಡೆದಿದ್ದು, ಈ ರೀತಿ ಗ್ಲಾಸ್ ಒಡೆದು ಕಳ್ಳತನ ನಡೆಸುವ ಗ್ಯಾಂಗ್ ಕಾರ್ಯಚರಿಸುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.