ಪಡುಬಿದ್ರಿ: ಫಲಿಮಾರು ಗ್ರಾಪಂ ವ್ಯಾಪ್ತಿಯ ರಸ್ತೆ ಸಂಪರ್ಕದಂತಹ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಯಾಗುವ ಮೂಲಕ ಫಲಿಮಾರು ಜಿಲ್ಲೆಯಲ್ಲಿ ಮಾದರಿ ಗ್ರಾಪಂ ಆಗಿ ಮೂಡಿಬರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಫಲಿಮಾರು ಗ್ರಾಪಂ ಸ್ಥಾನೀಯ ಸಮಿತಿ ವತಿಯಿಂದ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆಯ್ಕೆಯಾದ ಸದಸ್ಯರು ಗ್ರಾಮಸ್ಥರ ಅವರ ಬೇಡಿಕೆಗಳನ್ನು ಶೀಘ್ರ ಪರಿಹರಿಸುವ ಮೂಲಕ ಅವರ ವಿಶ್ವಾಸಗಳಿಸಬೇಕು. ಅಲ್ಲದೆ ಅಭಿವೃದ್ಧಿ ಕಾರ್ಯದಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಫಲಿಮಾರು ಅಭಿವೃದ್ಧಿಗೆ ತನ್ನಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೆಜಮಾಡಿ-ಅವರಾಲುಮಟ್ಟು-ಫಲಿಮಾರು ಸಂಪರ್ಕ ರಸ್ತೆಯನ್ನು 3ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ರಸ್ತೆ ಬಹುಕಾಲದ ಬೇಡಿಕೆಯಾಗಿದ್ದು, ಸುಜ್ಲಾನ್ ಕಂಪೆನಿಯಿಂದಾಗಿ ರಸ್ತೆ ಸಂಪರ್ಕ ಕಡಿದುಹೋಗಿತ್ತು. ಈ ಬಗ್ಗೆ ಇಲ್ಲಿನ ಗ್ರಾಮಸ್ಥರ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಮಾತನಾಡಿ, ಫಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಸಚಿವರು ತಮ್ಮ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈ ಭಾಗದ ಹಲವಾರು ರಸ್ತೆ ಸಂಪರ್ಕ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಜಿತೇಂದ್ರ ಪುರ್ಟಾಡೊ ಅವರನ್ನು ಸಚಿವ ಸೊರಕೆ ಅಭಿನಂದಿಸಿದರು. ಸದಸ್ಯರಾಗಿ ಆಯ್ಕೆಯಾದ ಶಿವರಾಮ ಪೂಜಾರಿ, ಬಿ.ಎಮ್.ಅಬ್ದುಲ್ಲಾ, ಜಯಂತಿ ಎಸ್.ಕೋಟ್ಯಾನ್, ಕಾಂಚನಾ, ವಿಜಯ ಶೆಡ್ತಿ, ಹೇಮಲತಾ ಆಚಾರ್ಯ ಅವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಯುವಕಾಂಗ್ರೆಸ್ ಫಲಿಮಾರು ಅಧ್ಯಕ್ಷರಾಗಿ ಆಯ್ಕೆಯಾದ ಸುಧೀಸ್ ದೇವಾಡಿಗ ಪಕ್ಷದ ಧ್ವಜ ನೀಡಿ ಗೌರವಿಸಲಾಯಿತು
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗ್ರಾಪಂ ಸದಸ್ಯರಾದ ಸತೀಶ್ ದೇವಾಡಿಗ, ಲೀಲಾಧರ ಬಂಗೇರ, ಗುರುಪ್ರಸಾದ್, ಯೋಗೀಶ್, ಚಂದ್ರಾವತಿ ಅಮೀನ್, ಆಶಾ ನಂದಿಕೂರುರ, ಸಂದೀಪ್, ಪ್ರಕಾಶ್ ಪೂಜಾರಿ, ಲೋಕೇಶ್ ಅವರನ್ನು ಪಕ್ಷದ ಧ್ವಜ ಹಸ್ತಾಂತರಿಸಲಾಯಿತು.
ಫಲಿಮಾರು ಚರ್ಚ್ ಧರ್ಮಗುರು ಚಾಲ್ರ್ಸ್ ನೊರೊನ್ಹಾ, ತಾಪಂ ಸದಸ್ಯ ಅಮಿತಾ ಎಸ್.ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ, ಹಿಂದುಳಿದ ವಿಭಾಗದ ಕಾಪು ಕ್ಷೇತ್ರ ಅಧ್ಯಕ್ಷ ದೀಪಕ್ ಎರ್ಮಾಳ್, ಸ್ಥಾನೀಯ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಗಿರಿಯಪ್ಪ ಪೂಜಾರಿ, ಅಬ್ದುಲ್ಲಾ ರಜಬ್, ಫ್ರಾನ್ಸಿಸ್ ಡಿಸೋಜ, ದಿನೇಶ್ ಕೋಟ್ಯಾನ್, ಗಣೇಶ್ ಕುಮಾರ್, ಯಶವಂತ ಪೂಜಾರಿ, ಜಯಂತಿ ಎಸ್.ಕೋಟ್ಯಾನ್, ರವಿ ಶೆಟ್ಟಿ ಉಪಸ್ಥಿತರಿದ್ದರು.