ಪಡುಬಿದ್ರಿ: ಹಣಕ್ಕಾಗಿ ಸಹೋದ್ಯೋಗಿಯಿಂದಲೇ ಕೊಲೆ: ಆರೋಪಿಯ ಬಂಧನ

Spread the love

ಪಡುಬಿದ್ರಿ:  ತನ್ನ ತಂಗಿ ಮದುವೆಗೆ ಕಲಬುರ್ಗಿಗೆ ಹೋಗಿ ಬರುವೆನೆಂದು ಎ. 17ರಂದು ರಜೆ ಹಾಕಿ ನಿಗೂಢವಾಗಿ ನಾಪತ್ತೆಯಾಗಿದ್ದು ಸುಮಾರು 20 ದಿನಗಳ ಬಳಿಕ ಶವವಾಗಿ ಪಾದೆಬೆಟ್ಟಿನ ಬಿಕ್ರಿಗುತ್ತು ಹಾಡಿಯಲ್ಲಿ ಛಿದ್ರ, ಛಿದ್ರವಾಗಿ ಪತ್ತೆಯಾಗಿದ್ದ ವಿದ್ಯುದುತ್ಪಾದನಾ ಯುಪಿಸಿಎಲ್‌ ಕಂಪೆನಿಯಲ್ಲಿ ಹೆಲ್ಪರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ ಪಟೇಲ್‌(24) ಇದೀಗ ತನ್ನ ಸಹೋದ್ಯೋಗಿಯಿಂದಲೇ ಎ. 17ರಂದು ಕೊಲೆಯಾಗಿದ್ದನೆಂಬುದು ಬಹಿರಂಗವಾಗಿದೆ.

padubidri_murder case 10-05-2015 01-56-53

ಕೊಲೆಗಾರರನನ್ನು ರಾಜಾ ಪಟೇಲ್‌ನ ಸಹ ಕಾರ್ಮಿಕ ಕುದುರೆಮುಖ ನೆಲ್ಲಿನೀಡು ವಾಸಿ ಸುಬ್ರಹ್ಮಣ್ಯ (38) ಎಂದು ಗುರುತಿಸಲಾಗಿದೆ.

ಈ ಕುರಿತು ಪಡುಬಿದ್ರೆ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಸಂತೋಷ್ ಕುಮಾರ್ ಅವರು ಕಲಬುರಗಿ ಜೇವರ್ಗಿಯ ರುಕುಮ್ ಪಟೇಲ್ ಎಂಬವರ ಮಗ ರಾಜಾ ಪಟೇಲ್ (24) ಕಳೆದ ಒಂದೂವರೆ ವರ್ಷದಿಂದ ಯುಪಿಸಿಎಲ್‌ನ ಸೀಮರ್ ಎಂಬ ಗುತ್ತಿಗೆ ಕಂಪನಿಯಲ್ಲಿ ಕಾರ್ಮಿಕನಾಗಿ ಸೇರಿಕೊಂಡಿದ್ದ. ಏ.21ರಂದು ತನ್ನ ಊರಿನಲ್ಲಿ ದೊಡ್ಡಮ್ಮನ ಮಗಳ ಮದುವೆ ಇದ್ದ ಕಾರಣ ಏಪ್ರಿಲ್ 17ರಂದು ರಜೆ ಹಾಕಿ ಊರಿಗೆ ತೆರಳಲು ಸಿದ್ಧತೆ ನಡೆಸಿದ್ದ.

ಆದರೆ ಆತ ಊರಿಗೆ ತೆರಳದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದು, ಏ.25ರಂದು ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿತ್ತು. ಮೇ 8ರಂದು ಪಡುಬಿದ್ರಿ ಪಾದೆಬೆಟ್ಟುವಿನ ಬಿಕ್ರಿಗುತ್ತುವಿನ ನಿರ್ಜನ ಹಾಡಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಬಟ್ಟೆ, ರಾಜಾ ಪಟೇಲ್‌ನ ಶವವೆಂದು ಗುರುತು ಹಿಡಿಯಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಾಪು ನಿರೀಕ್ಷಕ ಸುನಿಲ್ ನಾಯಕ್ ನೇತತ್ವದಲ್ಲಿ ಠಾಣಾಧಿಕಾರಿ ಅಜ್ಮತ್ ಆಲಿ ನಾಯಕತ್ವದಲ್ಲಿ ತಂಡವೊಂದನ್ನು ರಚಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ರಾಜಾಪಟೇಲ್‌ನ ನಾಪತ್ತೆಯಾದ ಮೊಬೈಲ್ ಫೋನ್ ಮೂಲಕವೇ ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು ಆತನ ಸಹಚರರ ಮೇಲೆ ತೀವ್ರ ನಿಗಾ ವಹಿಸಿದ್ದರು.

ಹಲವು ಕಾರ್ಮಿಕರ ತೀವ್ರ ವಿಚಾರಣೆಯ ಬಳಿಕ ನಾಪತ್ತೆಗೆ ಮುನ್ನ ರಾಜಾ ಪಟೇಲ್‌ನೊಂದಿಗೆ ಕೆಲಸ ಮಾಡಿದ್ದ ಸುಬ್ರಹ್ಮಣ್ಯ ಎಂಬಾತನ ಮೇಲೆ ಸಂಶಯಗೊಂಡು ಭಾನುವಾರ ಪಾದೆಬೆಟ್ಟು ದೇವಳದ ದ್ವಾರದ ಬಳಿ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಣಕ್ಕಾಗಿ ರಾಜಾ ಪಟೇಲನನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ರಾಜಾ ಪಟೇಲನು ತಂಗಿ ಮದುವೆಗಾಗಿ ಊರಿಗೆ ಹೊರಟಿದ್ದನ್ನು ಕಂಡು ತುಂಬಾ ಹಣ ಇರಬಹುದೆಂದು ಸಂಶಯಿಸಿ ಉಪಾಯವಾಗಿ ತನ್ನ ಮನೆಗೆ ಬರ ಹೇಳಿದ್ದನು. ಪಾದೆಬೆಟ್ಟುವಿನ ಸುಬ್ರಹ್ಮಣ್ಯನ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳು ಊರಿಗೆ ಹೋಗಿದ್ದು ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡಿದ್ದನು.

ಮನೆಯಲ್ಲಿ ಟಿವಿ, ಫ್ಯಾನ್ ಜೋರಾಗಿ ಹಾಕಿ ರಾಜಾ ಪಟೇಲ್ ಟಿವಿ ನೋಡುತ್ತಿದ್ದಾಗ ಹಿಂದಿನಿಂದ ನೈಲಾನ್ ಹಗ್ಗದಿಂದ ಕುತ್ತಿಗೆ ಬಿಗಿದು ತಲೆಗೆ ಪ್ಲಾಸ್ಟಿಕ್ ಚೀಲ ಹೊದಿಸಿ ಕೊಲೆ ಮಾಡಿದ್ದನು. ಅದೇ ದಿನ ರಾತ್ರಿ ಪ್ಲಾಸ್ಟಿಕ್ ಗೋಣಿ ಚೀಲ ಸಹಾಯದಿಂದ ಶವವನ್ನು ಮನೆಯಿಂದ 100 ಮೀ. ದೂರದ ನಿರ್ಜನ ಬಿಕ್ರಿಗುತ್ತು ಹಾಡಿಗೆ ಹೊತ್ತೊಯ್ದು ಬಿಸಾಡಿ ಬಂದಿದ್ದನು. ಮರುದಿನವೇ ಊರಿಗೆ ಹೋಗಿ 4,5 ದಿನ ಇದ್ದು, ಮರಳಿ ಪಡುಬಿದ್ರಿಗೆ ಆಗಮಿಸಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಆದರೆ ಮೇ 8ರಂದು ಕೊಳೆದು ಛಿದ್ರಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿ, ಅದು ರಾಜಾ ಪಟೇಲ್‌ನದ್ದೆಂದು ಖಚಿತಗೊಂಡ ಬಳಿಕ ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ತೀವ್ರ ಗೊಳಿಸಿದ್ದರು.  ನಾಪತ್ತೆಯಾದ ದಿನ ರಾಜಾ ಪಟೇಲ್ ಮೊಬೈಲ್‌ಗೆ ಬಂದ ಕರೆಗಳನ್ನು ಅನುಸರಿಸಿ ತನಿಖೆ ನಡೆಸಿದ ಪೊಲೀಸರಿಗೆ ಸುಬ್ರಹ್ಮಣ್ಯ ಎಂಬಾತನ ಮೇಲೆ ಸಂಶಯಗೊಂಡಿದ್ದರು.ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ತೀವ್ರ ಹಣದ ಅಡಚಣೆಗಾಗಿ ರಾಜಾ ಪಟೇಲ್ ನಲ್ಲಿ ಹೆಚ್ಚು ಹಣ ಇರಬಹುದೆಂದು ಸಂಶಯಿಸಿ ಆತನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಸುಬ್ರಹ್ಮಣ್ಯನ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಅಡಿ ಕೇಸು ದಾಖಲಿಸಲಾಗಿದ್ದು , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸಂದರ್ಭ ಡಿವೈಎಸ್ಪಿ ವಿನಯ ಎಸ್.ನಾಯಕ್, ಕಾಪು ನಿರೀಕ್ಷಕ ಸುನಿಲ್ ನಾಯಕ್, ಪಡುಬಿದ್ರಿ ಠಾಣಾಧಿಕಾರಿ ಅಜ್ಮತ್ ಆಲಿ, ಎಎಸ್‌ಐ ಕಮಲಾಕ್ಷ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿಗಾಗಿ ಕ್ಲಿಕ್ ಮಾಡಿ


Spread the love