ಪಡುಬಿದ್ರೆ ಬೀಚ್ಗೆ ‘ಬ್ಲೂ ಫ್ಲಾಗ್’ ಮಾನ್ಯತೆ
ಉಡುಪಿ: ತಾಲ್ಲೂಕಿನ ಪಡುಬಿದ್ರಿ ಬೀಚ್ಗೆ ಶೀಘ್ರ ಜಾಗತಿಕ ಮಟ್ಟದ ‘ಬ್ಲೂ ಫ್ಲಾಗ್’ ಮಾನ್ಯತೆ ದೊರೆಯಲಿದೆ. ಈ ಸಂಬಂಧ ಕೇಂದ್ರ ಪರಿಸರ ಮಂತ್ರಾಲಯವು ಡೆನ್ಮಾರ್ಕ್ನ ಫೌಂಡೇಷನ್ ಆಫ್ ಎನ್ವಿರಾನ್ಮೆಂಟ್ ಎಜುಕೇಷನ್ ಸಂಸ್ಥೆಗೆ ವರದಿ ಸಲ್ಲಿಸಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ತಿಳಿಸಿದ್ದಾರೆ.
ಸುಸ್ಥಿರ ಪ್ರವಾಸೋದ್ಯಮ ಹಾಗೂ ಆರೋಗ್ಯಕರ ಕರಾವಳಿ ತೀರದ ಬೀಚ್ಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈಚೆಗೆ ರಾಜ್ಯದ ಕರಾವಳಿ ತೀರಗಳನ್ನು ‘ಬ್ಲೂ ಫ್ಲಾಗ್’ ಮಾನ್ಯತೆಗೆ ಅನುಮೋದಿಸಲು ಪರಿಶೀಲನೆ ನಡೆಸಿತ್ತು. ಈ ಪೈಕಿ ಪಡುಬಿದ್ರಿ ಬೀಚ್ ಅನ್ನು ಅಂತಿಮವಾಗಿ ಆಯ್ಕೆ ಮಾಡಿದೆ ಎಂದು ಅವರು ಹೇಳಿದರು.
ಸೊಸೈಟಿ ಫಾರ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೆಜ್ಮೆಂಟ್, ಪರಿಸರ ಮಂತ್ರಾಲಯ, ಬೀಚ್ ಮ್ಯಾನೆಜ್ಮೆಂಟ್ ಸರ್ವೀಸ್ ಸಂಸ್ಥೆಯ ಸಹಯೋಗದಲ್ಲಿ ಪಡುಬಿದ್ರಿ ಬೀಚ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಗುಣಮಟ್ಟದ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಒಂದು ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಡುಬಿದ್ರಿ ಬೀಚ್ ವ್ಯಾಪ್ತಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛ ಪರಿಸರ, ಪರಿಸರ ಶಿಕ್ಷಣ ಹಾಗೂ ಸ್ಥಳೀಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ನಾನದ ನೀರಿನ ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳು, ಭದ್ರತಾ ವ್ಯವಸ್ಥೆ, ಕಡಲ ತೀರದ ನಿರ್ವಹಣೆಯನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ತಿಳಿಸಿದರು.
ನಗರದ ತ್ಯಾಜ್ಯ ಸಮುದ್ರಕ್ಕೆ ಸೇರದಂತೆ ತಡೆಯುವುದು, ಬೀಚ್ ಸ್ವಚ್ಛತೆಗೆ ಶುಚಿದಾರರ ನೇಮಕ, ಭದ್ರತಾ ಸಿಬ್ಬಂದಿ, ಜೀವರಕ್ಷಕರ ನೇಮಕ ಹಾಗೂ ಅವಘಡಗಳು ಎದುರಾದಾಗ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆ, ಮೂಲಸೌಕರ್ಯ, ಕಡಲ ತೀರದ ಜೀವವೈವಿಧ್ಯತೆಯ ಬಗ್ಗೆ ಕಾಳಜಿ, ಸ್ಥಳೀಯ ಆಹಾರ ಪದ್ಧತಿ, ಜೀವನಶೈಲಿಯನ್ನು ತಿಳಿಸಲಾಗುವುದು. ಬ್ಲೂ ಫ್ಲಾಗ್ ಮಾನ್ಯತೆ ಸಿಕ್ಕರೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ದೀಪಾ ಅನಿತಾ ತಿಳಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯ ಇಲಾಖೆ ಸಹಯೋಗದಲ್ಲಿ ಪಡುಬಿದ್ರಿ ಬೀಚ್ನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಜಿಲ್ಲೆಯ ಬಹುದಿನಗಳ ಕನಸು ನೆರವೇರಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
‘ಪಡುಬಿದ್ರಿ ಬೀಚ್ನ 500 ಮೀಟರ್ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಪರಿಸರ ಸ್ನೇಹಿ ವಸ್ತುಗಳ ಬಳಕೆ, ಜಾಗಿಂಗ್, ವಾಕಿಂಗ್ ಟ್ರ್ಯಾಕ್ಗಳ ನಿರ್ಮಾಣ, ಹೊರಾಂಗಣ ಜಿಮ್, ಮಕ್ಕಳ ಮನೋರಜನಾ ಚಟುವಟಿಕೆಗಳಿಗೆ ಅವಕಾಶ, ಶುದ್ಧ ನೀರಿನ ಘಟಕಗಳ ಸ್ಥಾಪನೆ, ಕೂರಲು ಆಸನಗಳ ಅಳವಡಿಕೆ, ಅಂಗವಿಕಲರಿಗೆ ವೀಲ್ಚೇರ್ ವ್ಯವಸ್ಥೆ, ಎಲ್ಇಡಿ ಬಲ್ಬ್ಗಳ ಅಳವಡಿಕೆ, ಛತ್ರಿಗಳನ್ನು ಒಳಗೊಂಡ ಆಸನಗಳು, ನೀರಿನ ಮರುಬಳಕೆ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು, ಸುರಕ್ಷತಾ ಧ್ವಜ, ವೀಕ್ಷಣಾ ಗೋಪುರಗಳ ನಿರ್ಮಾಣವನ್ನು ಯೋಜನೆಯಡಿ ಮಾಡಲಾಗುವುದು ಎಂದು ಅನಿತಾ ಅವರು ತಿಳಿಸಿದರು.
ಇದಕ್ಕಾಗಿ ಈಗಾಗಲೇ ಕೇಂದ್ರ ಸರ್ಕಾರ 8 ಕೋಟಿ ಮೊತ್ತದ ಜಾಗತಿಕ ಟೆಂಡರ್ ಕರೆದಿದ್ದು, ಗುರುಗ್ರಾಮ ಕಂಪೆನಿ ಗುತ್ತಿಗೆ ಪಡೆದುಕೊಂಡಿದೆ. ಶೀಘ್ರವೇ ಸಕಲ ಸವಲತ್ತುಗಳು ಪಡುಬಿದ್ರೆ ಬೀಚ್ನಲ್ಲಿ ನಿರ್ಮಾಣವಾಗಲಿವೆ. ನಂತರ ಡೆನ್ಮಾರ್ಕ್ ಕಂಪೆನಿ ಅಧಿಕಾರಿಗಳು ಬೀಚ್ಗೆ ಭೇಟಿನೀಡಿ ಪರಿಶೀಲಿಸಿ ಬ್ಲೂ ಫ್ಲಾಗ್ ಮಾನ್ಯತೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.