Home Mangalorean News Kannada News ಪತ್ರಕರ್ತನ ಕೊಲೆಗೆ ಸುಪಾರಿ: ರವಿ ಬೆಳಗೆರೆ ಬಂಧನ

ಪತ್ರಕರ್ತನ ಕೊಲೆಗೆ ಸುಪಾರಿ: ರವಿ ಬೆಳಗೆರೆ ಬಂಧನ

Spread the love

ಪತ್ರಕರ್ತನ ಕೊಲೆಗೆ ಸುಪಾರಿ: ರವಿ ಬೆಳಗೆರೆ ಬಂಧನ

ಬೆಂಗಳೂರು: ವೈಯಕ್ತಿಕ ದ್ವೇಷದಿಂದ ಪತ್ರಕರ್ತ ಸುನಿಲ್​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್​ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದೆ.

ವಿಜಯಪುರ ಮೂಲದ ಸುಪಾರಿ ಕಿಲ್ಲರ್​ಗಳಾದ ಶಶಿಧರ್​ ಮುಂಡೇವಾಡಿ​ ಮತ್ತು ಆತನ ಸ್ನೇಹಿತರನ್ನು ಸಿಸಿಬಿ ಬಂಧಿಸಿತ್ತು. ಇವರು ರವಿ ಬೆಳಗೆರೆ ಸುಪಾರಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಶುಕ್ರವಾರ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ರವಿ ಬೆಳಗೆರೆಯವರನ್ನು ಬಂಧಿಸಿದೆ.

ಒಂದು ತಿಂಗಳ ಹಿಂದೆ ಸುನಿಲ್​ ಅವರನ್ನು ಕೊಲ್ಲಲು ಶಶಿಧರ್​ ನಡೆಸಿದ ಯತ್ನ ವಿಫಲವಾಗಿತ್ತು. ಆರೋಪಿ 2ನೇ ಪ್ರಯತ್ನದಲ್ಲಿ ಸುನಿಲ್​ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಈತ ತಾಹಿರ್​ ಎಂಬಾತನಿಂದ ಪಿಸ್ತೂಲು ಪಡೆದಿದ್ದ. ಇತ್ತೀಚೆಗೆ ಸಿಸಿಬಿ ಪೊಲೀಸರು ತಾಹಿರ್​ನನ್ನು ಬಂಧಿಸಿದ್ದರು. ತಾಹಿರ್​ ಪೊಲೀಸರಿಗೆ ಶಶಿಧರ್​ ಕುರಿತು ಮಾಹಿತಿ ನೀಡಿದ್ದ. ಎಸ್​ಐಟಿ ಶಶಿಧರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ಕೊಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

ಸುನಿಲ್​ ಅವರು 2002 ರಿಂದ 2015ರವರೆಗೆ ಸುಮಾರು 13 ವರ್ಷಗಳ ಕಾಲ ಹಾಯ್​ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. 2015ರಲ್ಲಿ ಇಬ್ಬರ ನಡುವೆ ಕೆಲ ಕಾರಣಗಳಿಂದ ಭಿನ್ನಾಭಿಪ್ರಾಯ ಉಂಟಾಗಿತ್ತು. ಇತ್ತೀಚೆಗೆ ಸುನಿಲ್​ ಮತ್ತೆ ಹಾಯ್​ ಬೆಂಗಳೂರು ಪತ್ರಿಕೆಗೆ ಸೇರ್ಪಡೆಯಾಗಿದ್ದರು.

ಹಾಯ್​ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರು ಶಾಸಕ ನಾಗರಾಜ್, ಸ್ಪೀಕರ್ ಕೆ.ಬಿ. ಕೋಳಿವಾಡ ವಿರುದ್ಧ ಮತ್ತು ‘ಯಲಹಂಕ ವಾಯ್ಸ್’ ಪತ್ರಿಕೆ ಸಂಪಾದಕ ಅನಿಲ್​ರಾಜ್, ಯಲಹಂಕ ಶಾಸಕ ವಿಶ್ವನಾಥ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು. ಈ ಆರೋಪದ ಹಿನ್ನೆಲೆ ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಇಬ್ಬರಿಗೂ 1 ವರ್ಷ ಜೈಲು, 10 ಸಾವಿರ ರೂ.ದಂಡ ವಿಧಿಸುವಂತೆ ಶಿಫಾರಸು ಮಾಡಿತ್ತು. ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸನ್ನು ಕಳೆದ ಜೂ.21ರಂದು ಸದನದ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಬಂಧನದ ಭೀತಿ ಎದುರಿಸುತ್ತಿದ್ದರು.


Spread the love

Exit mobile version