ಪತ್ರಕರ್ತರಲ್ಲಿ ಸಾಮಾಜಿಕ ಬದ್ದತೆ ಅಗತ್ಯ- ಕೆ.ಸಿ ರಾಜೇಶ್
ಕೋಟ: ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ ಹಾಗೂ ಯಾವುದೇ ವಿಚಾರವನ್ನು ಮತ್ತೆ-ಮತ್ತೆ ವಿಮರ್ಶಿಸುವ ಗುಣ ಅಗತ್ಯ ಎಂದು ಹಿರಿಯ ಪತ್ರಕರ್ತ ಕುಂದಾಪುರದ ಕೆ.ಸಿ.ರಾಜೇಶ್ ಹೇಳಿದರು.
ಅವರು ಕೋಟ ಪಡುಕೆರೆ ಲಕ್ಷ್ಮೀಸೋಮ ಬಂಗೇರ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಮಂಗಳವಾರ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ(ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ)ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದಲ್ಲಿ ಹಲವಾರು ಉದ್ಯೋಗವಕಾಶಗಳಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗುರಿ ಸಾಧನೆಗಾಗಿ ಹೆಚ್ಚಿನ ಶ್ರಮ ವಿನಿಯೋಗಿಸಬೇಕು ಎಂದರು.
ಈ ಸಂದರ್ಭ ಬಾರ್ಕೂರು ಪರಿಸರದಲ್ಲಿ ಸುಮಾರು 40ವರ್ಷಗಳಿಗೂ ಅಧಿಕ ಸಮಯದಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಶಾಸ್ತ್ರಿ ಮತ್ತು ವಸುಧಾ ಶಾಸ್ತ್ರಿ ದಂಪತಿಗಳನ್ನು ಸಮ್ಮಾನಿಸಲಾಯಿತು. ಪತ್ರಿಕೋದ್ಯಮದಲ್ಲಿ ಉದ್ಯೋಗವಕಾಶ ಎನ್ನುವ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. .
ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬ್ರಹ್ಮಾವರ ವಲಯದ ಪ್ರತಿನಿಧಿ ಗಣೇಶ್ ಸಾೈಬ್ರಕಟ್ಟೆ ಉಪಸ್ಥಿತರಿದ್ದರು.
ಪತ್ರಕರ್ತ ವಸಂತ ಗಿಳಿಯಾರ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ರಾಜೇಶ ಅಚ್ಲಾಡಿ ಸಮ್ಮಾನಿತರನ್ನು ಪರಿಚಯಿಸಿ, ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಶೇಷಗಿರಿ ಭಟ್ ವಂದಿಸಿದರು.